ಕೊಪ್ಪಳ ಜಿಲ್ಲೆಯ ಜನರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಗಂಗಾವತಿಯಲ್ಲಿ ಸಮುದಾಯ ರೇಡಿಯೋ ಕೇಂದ್ರವನ್ನು ಆರಂಭಿಸಲು ಒಪ್ಪಿಗೆ ನೀಡಿದೆ.
ಮಡಿಕೇರಿ, ಮಾರ್ಚ್ 03; ಕೊಪ್ಪಳ ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಜಿಲ್ಲೆಯ ಪ್ರಥಮ ಸಮುದಾಯ ರೇಡಿಯೋ ಕೇಂದ್ರವನ್ನು ಗಂಗಾವತಿಯಲ್ಲಿ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಕೊಪ್ಪಳ ಸಂಸದ ಕರಡಿ ಸಂಗಣ್ಣ ಈ ಕುರಿತು ಮಾಹಿತಿ ನೀಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾರತಿ 90.4 ಎಫ್.ಎಂ 'ನೂರು ಸ್ವರ ಒಂದೇ ಶೃತಿ' ಎಂಬ ಹೆಸರಿನಲ್ಲಿ ಜಿಲ್ಲೆಯ ಮೊದಲ ಸಮುದಾಯ ರೇಡಿಯೋ ಕೇಂದ್ರವನ್ನು ಗಂಗಾವತಿಯಲ್ಲಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಮುದಾಯ ರೇಡಿಯೋ ಕೇಂದ್ರದ ಸ್ಥಾಪನೆಯಿಂದಾಗಿ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ.

ದೀಪ ಸಮಾಜ ಸೇವಾ ಕೇಂದ್ರವು ಕಳೆದ 22 ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು, ಹಲವಾರು ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ಕೇಂದ್ರವು ಗಂಗಾವತಿಯಲ್ಲಿ 'ಗ್ರಾಮೀಣ ಭಾರತಿ 90.4 ಎಫ್.ಎಂ ಸಮುದಾಯ ರೇಡಿಯೋ ಸ್ಥಾಪಿಸಲು ಯೋಜಿಸಿ ಇದಕ್ಕಾಗಿ ನಿರಂತರ 10 ವರ್ಷಗಳ ಕಾಲ ಶ್ರಮಿಸಿತ್ತು.
ಕೇಂದ್ರ ಸರಕಾರದಿಂದ ಈಗ ಅನುಮೋದನೆ ಪಡೆದುಕೊಂಡು ಗಂಗಾವತಿ ನಗರಕ್ಕೆ ರೇಡಿಯೋ ತರುವಲ್ಲಿ ಯಶಸ್ವಿಯಾಗಿರುವುದು ವಿಶೇಷ ಸಾಧನೆಯಾಗಿದೆ. ರೇಡಿಯೋ ಕೇಂದ್ರದ ಸ್ಥಾಪನೆಯಿಂದಾಗಿ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಈ ಭಾಗದ ಸಾಹಿತಿಗಳಿಗೆ, ಲೇಖಕರಿಗೆ, ರೈತ ಸಮುದಾಯದವರಿಗೆ, ಸಾರ್ವಜನಿಕರಿಗೆ ಅನುಕೂಲಕವಾಗಲಿದೆ.

ಮನ್ ಕಿ ಬಾತ್; ಕೇಂದ್ರ ಸರ್ಕಾರ ವಿವಿಧ ನಗರಗಳಲ್ಲಿ ಎಫ್‌ಎಂ ರೇಡಿಯೋ ಕೇಂದ್ರವನ್ನು ತೆರೆಯಲು ಈಗ ಅನುಮತಿ ನೀಡುತ್ತಿದೆ. ಆ ಮೂಲಕ ರೇಡಿಯೋ ಬಳಕೆಗೆ ಪ್ರೋತ್ಸಾಹವನ್ನು ನೀಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮ ಆರಂಭಿಸಿದ್ದು, ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರೇಡಿಯೋ ಶೋತೃಗಳು, ಆರ್‌ಜೆಗಳು ಮತ್ತು ಪ್ರಸಾರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರಿಗೂ ಶುಭಾಶಯ ಕೋರಿದ್ದರು. 'ವಿಶ್ವ ರೇಡಿಯೋ ದಿನದ ವಿಶೇಷ ಸಂದರ್ಭದಲ್ಲಿ ಎಲ್ಲಾ ರೇಡಿಯೋ ಕೇಳುಗರಿಗೆ, ಆರ್‌ಜೆಗಳಿಗೆ ಮತ್ತು ಪ್ರಸಾರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರಿಗೂ ಶುಭಾಶಯಗಳು. ರೇಡಿಯೋ ನವೀನ ಕಾರ್ಯಕ್ರಮಗಳ ಮೂಲಕ ಮತ್ತು ಮಾನವ ಸೃಜನಶೀಲತೆಯನ್ನು ಪ್ರದರ್ಶಿಸುವ ಮೂಲಕ ಜೀವನವನ್ನು ಬೆಳಗಿಸಲಿ' ಎಂದು ಹಾರೈಸಿದ್ದರು.












Click it and Unblock the Notifications