ಮೀಸಲಾತಿ ವಿಚಾರವಾಗಿ ಮೊದಲ ಹೆಜ್ಜೆ ಇಟ್ಟಿದ್ದೇ ಮೈತ್ರಿ ಸರ್ಕಾರ: ಸತೀಶ್ ಜಾರಕಿಹೊಳಿ
ಕೊಪ್ಪಳ, ನವೆಂಬರ್ 21: ಹಿಂದೂ ಪದದ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೆ ಸತೀಶ್ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದ್ದರು.
ಇದೀಗ ಸತೀಶ್ ಜಾರಕಿಹೊಳಿ ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ್ದಾರೆ. ಹಿಂದೂ ಪದದ ನನ್ನ ಹೇಳಿಕೆಯ ಬಗ್ಗೆ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ ಎಂದು ಹೇಳಿದ್ದಾರೆ.
ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಆಹ್ವಾನಕ್ಕೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಅವನ ಅಹ್ವಾನಕ್ಕೆ ನಾನು ಹೊಗುವ ಅವಶ್ಯಕತೆ ಇಲ್ಲ. ಆತ ಸುಳ್ಳಿನ ಸರದಾರ, ಸುಳ್ಳಿನ ವಿಶ್ವ ವಿದ್ಯಾಲಯದ ಕುಲಪತಿ, ಆತನ ಜೊತೆ ಚರ್ಚೆಗೆ ನಾನು ಹೋಗಬೇಕಾ..? ಚಿನ್ನದ ರಸ್ತೆ ಎಲ್ಲಿದೆ, ಬುಲೆಟ್ ಟ್ರೈನ್ ಎಲ್ಲಿದೆ..? ಎಂದು ಚಕ್ರವರ್ತಿ ಸೂಲಿಬೆಲೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮುಂದಿನ ವಿಧಾನ ಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಹೈಕಮಾಂಡ್. ಕೊಪ್ಪಳದಲ್ಲಿ ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆಯಲ್ಲಿ ಕೆಲ ಮಾಜಿ ಶಾಸಕರು, ಶಾಸಕರು ಇರುತ್ತಾರೆ. ಅವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ದೃಷ್ಟಿಯಲ್ಲಿ ಹೇಳಿರಬೇಕು. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಸಮಾವೇಶ ಮಾಡುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್‌ನಿಂದ ಎಸ್‌ಸಿ ಎಸ್‌ಟಿ ಸಮಾವೇಶ ಮಾಡುವ ಬಗ್ಗೆ ಸಭೆಯಾಗಿದೆ. ಎಲ್ಲಿ ಯಾವಾಗ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು.

ಇನ್ನು ನಿನ್ನೆ ಬಿಜೆಪಿ ಸಚಿವ ಶ್ರೀರಾಮುಲು ಆವೇಶಭರಿತರಾಗಿ ಭಾಷಣ ಮಾಡುವ ಅಗತ್ಯ ಇರಲಿಲ್ಲ. ಮೀಸಲಾತಿ ಕೊಡುವ ಬಗ್ಗೆ ಮೊದಲ ಹೆಜ್ಜೆ ಇಟ್ಟಿದ್ದೇ ಮೈತ್ರಿ ಸರ್ಕಾರ. ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದ್ದಾಗಲೇ ಆಯೋಗ ರಚನೆ ಮಾಡಿದ್ದೆವು. ಬಿಜೆಪಿಯವರು ವಿನಾಃಕಾರಣ ತಡ ಮಾಡಿದರು. ಕೊನೆಗೂ ಸ್ವಾಮೀಜಿ ಅವರ ದಿಟ್ಟ ನಿರ್ಧಾರಕ್ಕೆ ಮಣಿದು ಮೀಸಲಾತಿ ಕೊಟ್ಟಿದ್ದಾರೆ. ಎಸ್‌ಟಿ ಸಮೂದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 30 ಸಾವಿರ ಕೋಟಿ ಕೊಟ್ಟಿದ್ದರು. ಕೇಂದ್ರ ಸರ್ಕಾರ ನೀಡಿದ ಅನುದಾನದ ಅರ್ಧಕ್ಕಿಂತ ಹೆಚ್ಚು ನಾವು ಕೊಟ್ಟಿದ್ದೇವು. ಒಂದು ಕೊಟ್ಟು ಒಂದು ಕಿತ್ತುಕೊಳ್ಳುವುದು ಬಿಜೆಪಿ ಕೆಲಸ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications