ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ
ಕೊಪ್ಪಳ, ಫೆಬ್ರವರಿ 19; ಕೊಪ್ಪಳ ಜಿಲ್ಲೆಯ ಗಂಗಾವತಿ ಕರ್ನಾಟಕದ ಭತ್ತದ ಕಣಜವಾಗಿದೆ. ಇಲ್ಲಿ ಬೆಳೆಯುವ ಸೋನಾಮಸೂರಿ ಅಕ್ಕಿ ರಾಜ್ಯ ಮಾತ್ರವಲ್ಲಿ ವಿದೇಶಗಳಲ್ಲಿ ಸಹ ಬೇಡಿಕೆಯನ್ನು ಪಡೆದುಕೊಂಡಿದೆ.
ಗಂಗಾವತಿಯ ಅಕ್ಕಿ ಉದ್ಯಮಕ್ಕೆ ಉತ್ತೇಜನ ನೀಡಲು ನೈಋತ್ಯ ರೈಲ್ವೆ ಸರಕು ಸಾಗಣೆಗಾಗಿಯೇ ಫ್ಲಾಟ್ ಫಾರ್ಮ ಸಹಿತವಾಗಿ ಪ್ರತ್ಯೇಕ ಮಾರ್ಗವನ್ನು ಗಂಗಾವತಿ ರೈಲು ನಿಲ್ದಾಣದಲ್ಲಿ ನಿರ್ಮಾಣ ಮಾಡಿದೆ.
ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗಕ್ಕೆ ಗಂಗಾವತಿ ಸೇರುತ್ತದೆ. ಪ್ರತ್ಯೇಕ ಮಾರ್ಗದ ಮೂಲಕ ಫೆಬ್ರವರಿ 14ರಂದು 1326 ಟನ್ ಅಕ್ಕಿಯನ್ನು ಗಂಗಾವತಿ ನಿಲ್ದಾಣದಿಂದ ಅಸ್ಸಾಂನ ಗುವಾಹತಿ ಸಮೀಪದ ಅಜ್ರಾಕ್ಕೆ ಸಾಗಣೆ ಮಾಡಲಾಗಿದೆ.

ಅಕ್ಕಿಯನ್ನು ಹೊತ್ತ ರೈಲು 2795 ಕಿ. ಮೀ. ಸಂಚಾರ ನಡೆಸಿದೆ. ಇದರಿಂದಾಗಿ ನೈಋತ್ಯ ರೈಲ್ವೆಗೆ 40.45 ಲಕ್ಷ ಆದಾಯ ಬಂದಿದೆ. ಪ್ರತ್ಯೇಕ ಮಾರ್ಗದ ವ್ಯವಸ್ಥೆಯಿಂದಾಗಿ ಪ್ರತಿ ತಿಂಗಳು 3 ರಿಂದ 4 ಮಿನಿ ರೇಕ್ಸ್ ಲಭಿಸುವ ನಿರೀಕ್ಷೆ ಇದೆ.

ಈ ಮಾರ್ಗವನ್ನು ಕೇವಲ ಅಕ್ಕಿ ಮಾತ್ರವಲ್ಲ ಧಾನ್ಯ, ರಸಗೊಬ್ಬರ ಸಾಗಟಕ್ಕೂ ಬಳಕೆ ಮಾಡಲಾಗುತ್ತದೆ. ಗೂಡ್ಸ್ ಶೆಡ್ ನಿರ್ಮಾಣದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ಸಹ ಅನುಕೂಲವಾಗಲಿದೆ.
ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಎಂ ಅರವಿಂದ ಮಾಲಖೇಡೆ ಈ ಕುರಿತು ಹೇಳಿಕೆ ನೀಡಿದ್ದು, "ಸರಕು ಸಾಗಣೆಗೆ ರೈಲ್ವೆ ಅತ್ಯುಪಯುಕ್ತ ಮಾರ್ಗವಾಗಿದೆ. ಅತಿ ವೇಗ, ಅತಿ ಸುರಕ್ಷಿತ, ಕನಿಷ್ಠ ವೆಚ್ಚದಲ್ಲಿ ಸಾಗಣೆ ಮಾಡಬಹುದು" ಎಂದು ಹೇಳಿದ್ದಾರೆ.












Click it and Unblock the Notifications