ತುಂಗಭದ್ರಾ ಜಲಾಶಯ ಬಳಿಯ ನಿಷೇಧಿತ ಕಿರು ಸೇತುವೆ ಮೇಲೆ ಜನರ ಹುಚ್ಚಾಟ
ಕೊಪ್ಪಳ, ಜುಲೈ 19: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಈ ಬಾರಿ ದಾಖಲೆಯ ಮುಂಗಾರು ದಾಖಲೆಯಾಗಿದೆ. ಮಲೆನಾಡಿನ ಭಾಗದಲ್ಲಿ ರಸ್ತೆಗಳು, ಮನೆಗಳು ಕುಸಿದಿವೆ. ಜಲಾಶಯಗಳು ತುಂಬಿದ್ದರಿಂದ ನದಿಗೆ ನೀರು ಬಿಡಲಾಗಿದೆ.
ಜಲಪಾತಗಳು ಧುಮ್ಮಿಕ್ಕಿ ಹರಿಯುವುದನ್ನು ನೋಡುವುದಕ್ಕೆ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಆದರೆ ಜಲಪಾತ, ನದಿಗಳ ಬಳಿ ಪ್ರವಾಸಿಗರು ಫೋಟೋಗಳನ್ನು ತೆಗೆದುಕೊಳ್ಳಲು ಮುಗಿ ಬೀಳುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವು ತಂದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತುಂಗಭದ್ರಾ ನದಿಯ ಜಲಾನಯನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಈ ಭಾಗದಲ್ಲಿ ವ್ಯಾಪಕವಾದ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಿದೆ.

ಆದರೂ ಪ್ರವಾಸಿಗರು ಸೆಲ್ಫೀ, ಫೋಟೋಗಳನ್ನು ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಜನರ ಹುಚ್ಚಾಟ ಪೊಲೀಸರಿಗೆ ಪ್ರಾಣಸಂಕಟದ ವಿಷಯವಾಗಿದೆ. ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದರೂ, ಅಪಾಯವನ್ನು ಲೆಕ್ಕಿಸದೇ ಜನರು ಮಾತ್ರ ತಮ್ಮ ಹುಚ್ಚಾಟ ಮುಂದುವರೆಸಿದ್ದಾರೆ.
ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಆದರೂ ಜಲಾಶಯ ನೋಡಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮುನಿರಾಬಾದ್ ಬಳಿ ಇರುವ ಹಳೆ ಸೇತುವೆ ಮೇಲೆ ನಿಂತುಕೊಂಡು ಜಲಾಶಯದ ಕ್ರಸ್ಟ್ ಗೇಟ್ ನಿಂದ ಬೀಳುವ ನೀರಿನ ಬ್ಯಾಕ್ ಗ್ರೌಂಡ್ ಬರುವ ಹಾಗೆ ಜನರು ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸೇತುವೆ ಹಳೆಯದಾಗಿರುವುದರಿಂದ ನೀರಿನ ರಭಸಕ್ಕೆ ಯಾವಾಗ ಬೇಕಾದರೂ ಏನಾದರೂ ಆದರೂ ಆಗಬಹುದು. ಅಲ್ಲದೇ ನದಿ ನೀರು ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಜನರು ಅಲ್ಲಿಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಅದಕ್ಕಾಗಿ ಯಾರೂ ಅತ್ತ ತೆರಳದಂತೆ ಬ್ಯಾರಿಕೇಡ್ ಮತ್ತು ಮುಳ್ಳಿನ ಬೇಲಿ ಹಾಕಿದರೂ ಸಹ ಜನರು ಅದನ್ನು ಬ್ಯಾರಿಕೇಡ್ ಕೆಡವಿ, ಬೇಲಿ ಹಾರಿಕೊಂಡು ಹೋಗಿ ಅಪಾಯದ ಸ್ಥಳದಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಇದೇ ರೀತಿ ಹುಚ್ಚಾಟದ ನಡೆಸಿದ್ದರಿಂದ ಜಲಾಶಯದ ಇಇ ಶಿವಶಂಕರ್ ಇತ್ತೀಚಿಗೆ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದರು. ಆದರೂ ಸಹ ಜನರು ಅಪಾಯವನ್ನು ಲೆಕ್ಕಿಸದೇ ಪದೇ ಪದೇ ಸೇತುವೆ ಮೇಲೆ ತೆರಳುವುದನ್ನು ನಿಲ್ಲಿಸುತ್ತಿಲ್ಲ. ಇದು ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೂ ದೊಡ್ಡ ತಲೆನೋವು ತರಿಸುತ್ತಿದೆ.
ಜಲಾಶಯಕ್ಕೆ ಸುಮಾರು 1.64 ಲಕ್ಷ ಕ್ಯೂಸೆಕ್ ಒಳಹರಿವು ಇದೆ. 105.788 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಈಗ ಸದ್ಯಕ್ಕೆ 99 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ 1.50 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದ ಕ್ರಸ್ಟ್ ಗೇಟ್ ಮೂಲಕ ನದಿಗೆ ಹರಿಸಲಾಗುತ್ತಿದೆ.
ತೆಪ್ಪದಲ್ಲಿ ತುಂಗಾಭದ್ರ ನದಿ ದಾಟುತ್ತಿರುವ ರೈತರು; ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿ ನೀರಿನಲ್ಲಿ ರೈತರು ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಜೋರು ಹರಿಯುವ ನದಿಯಲ್ಲಿ ಪ್ರಾಣ ಭಯವನ್ನೂ ಲೆಕ್ಕಿಸದೇ ತೆಪ್ಪದ ಮೂಲಕ ನದಿ ದಾಟಿ ಜಮೀನಿಗೆ ತೆರಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪದ ನಿಟ್ಟೂರು ಗ್ರಾಮದಲ್ಲಿ ಇಂತಹ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ನಿಟ್ಟೂರು ಗ್ರಾಮಸ್ಥರು ರಭಸವಾಗಿ ಹರಿಯುತ್ತಿರುವ ನದಿ ನೀರನ್ನು ದಾಟುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.












Click it and Unblock the Notifications