ಬಿಜೆಪಿ ಟಿಕೆಟ್‌ಗೆ ಸಂಸದರ ಪ್ರಯತ್ನ; ಬೆಂಗಳೂರಲ್ಲಿ ವಾಸ್ತವ್ಯ!
ಬೆಂಗಳೂರು, ಏಪ್ರಿಲ್ 06; ಈ ಬಾರಿಯ ವಿಧಾನಸಭೆ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ಇನ್ನೂ ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್ ಗುರುವಾರ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 13ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಏಕೆ ಪಟ್ಟಿ ಬಿಡುಗಡೆ ಮಾಡಿಲ್ಲ? ಎಂದು ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆಯೇ? ಎಂಬುದನ್ನು ಪಕ್ಷದ ನಾಯಕರೇ ಹೇಳಬೇಕಿದೆ.

ಈ ಬಾರಿಯ ವಿಧಾನಸಭೆ ಚುನಾವಣೆ ಟಿಕೆಟ್ ಪಡೆಯಲು ಸಂಸದರೊಬ್ಬರು ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿ ಇದೆ. ಇದಕ್ಕಾಗಿ ಅವರು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿ, ವಿವಿಧ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ನಾಯಕರು ಹೇಳಿದ್ದಾರೆ. ಆದರೆ ಸಂಸದರು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ಯಾವ ಸಂಸದರು?; ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಸಂಸದ ಸಂಗಣ್ಣ ಕರಡಿ (72) ಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷದ ಟಿಕೆಟ್ ಪಡೆಯಲು ಸಿ. ವಿ. ಚಂದ್ರಶೇಖರ್ ಮತ್ತು ಸಂಗಣ್ಣ ಕರಡಿ ನಡುವೆ ಪೈಪೋಟಿ ನಡೆಯುತ್ತಿದೆ. ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಹಿನ್ನಲೆಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ರಾಜ್ಯ ರಾಜಕೀಯಕ್ಕೆ ಬರಲು ಸಂಗಣ್ಣ ಕರಡಿ ಚಿಂತನೆ ನಡೆಸಿದ್ದಾರೆ. ಆದ್ದರಿಂದ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ.
ಕೊಪ್ಪಳ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಕೆ. ರಾಘವೇಂದ್ರ ಹಿಟ್ನಾಳ್. ಕಳೆದ ಚುನಾವಣೆಯಲ್ಲಿ 98,783 ಮತಗಳನ್ನು ಪಡೆದು ಅವರು ಬಿಜೆಪಿಯ ಅಮರೇಶ್ ಸಂಗಣ್ಣ ಕರಡಿ (72,432) ಸೋಲಿಸಿದ್ದರು. ಆದರೆ ಈ ಬಾರಿ ಸಂಗಣ್ಣ ಕರಡಿ ಪುತ್ರನ ಬದಲು ನನಗೆ ಟಿಕೆಟ್ ನೀಡಿ ಎಂದು ಪ್ರಯತ್ನ ನಡೆಸುತ್ತಿದ್ದಾರೆ. ಜಿಲ್ಲೆಯ ಇತರ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ. ಸಂಸದರಿಗೆ ಅಷ್ಟು ಸುಲಭವಾಗಿ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಪಕ್ಷದಲ್ಲಿ ಕೇಳಿ ಬರುತ್ತಿದೆ.

ಕೆಲವು ದಿನಗಳ ಹಿಂದೆ ಕೊಪ್ಪಳದ ಕುಷ್ಟಗಿಯಲ್ಲಿ ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ ಹಾಗೂ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶಶಿಧರ ಕವಲಿ ಸಂಸದರಾದ ಸಂಗಣ್ಣ ಕರಡಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕೊಪ್ಪಳ ಜಿಲ್ಲೆಯ ಹಿರಿಯ ರಾಜಕಾರಣಿಯಾದ ಸಂಗಣ್ಣ ಕರಡಿ ಅಭಿವೃದ್ಧಿಯ ಹರಿಕಾರರು. ಅವರಿಗೆ ಟಿಕೆಟ್ ನೀಡಿದರೆ ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಸಹಾಯಕವಾಗುತ್ತದೆ. ಪಕ್ಷ ಸಂಘಟನೆ ಮತ್ತಷ್ಟು ಬಲವಾಗಲಿದೆ, ಜನರ ನಡುವೆ ಇರುವ ಸಂಗಣ್ಣ ಕರಡಿ ಅವರಿಂದ ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ಹೇಳಿದ್ದರು.
ಆಗ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಸದ ಸಂಗಣ್ಣ ಕರಡಿ, "ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಪಕ್ಷದ ನಿರ್ಣಯ. ನಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಲ್ಲ. ಪಕ್ಷ ನಿರ್ಣಯ ಮಾಡಿದರೆ ಮಾತ್ರ ಚುನಾವಣೆಗೆ ನಿಲ್ಲುತ್ತೇನೆ. ಇಲ್ಲವೇ ಯಾರೇ ಅಭ್ಯರ್ಥಿಯಾದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಪಕ್ಷ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ" ಎಂದು ಹೇಳಿದ್ದರು.
ಸಂಗಣ್ಣ ಕರಡಿ ಅವರ ಸ್ವ ಗ್ರಾಮದ ಜಾತ್ರೆಯಲ್ಲಿ ಮುಂದಿನ ಕೊಪ್ಪಳ ಎಂಎಲ್‌ಎ ಸಂಗಣ್ಣ ಕರಡಿ ಎಂದು ಅಭಿಯಾನಿಯೊಬ್ಬ ಬಾಳೆಹಣ್ಣಿನ ಮೇಲೆ ಬರೆದು ತೇರಿನ ಮೇಲೆ ಎಸೆದಿದ್ದನು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ ಸಂಗಣ್ಣ ಕರಡಿ ರಾಜ್ಯ ರಾಜಕೀಯಕ್ಕೆ ಬರುತ್ತಾರೆಯೇ? ಎಂಬ ಕುತೂಹಲ ಎದ್ದಿತ್ತು.












Click it and Unblock the Notifications