ಸಂಪಾದಿಸದ ಗಂಡ; ಸಿಟ್ಟಿನಿಂದ ಮಗುವನ್ನೇ ಕೊಂದ ತಾಯಿ
ಕೊಪ್ಪಳ, ಸೆಪ್ಟೆಂಬರ್ 10: ಗಂಡ ಸಂಪಾದನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಬೇಸತ್ತು ಮಹಿಳೆಯು ತನ್ನ ಒಂದೂವರೆ ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿಯ ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಕವಿತಾ (24) ಮಗುವನ್ನು ಕೊಂದ ತಾಯಿ. ಒಂದೂವರೆ ವರ್ಷದ ಅಭಿನವ ಸಾವನ್ನಪ್ಪಿದ ಮಗು. ಕವಿತಾ ನಾಲ್ಕು ವರ್ಷದ ಹಿಂದೆ ಶಶಿ ಎಂಬುವರನ್ನು ಮದುವೆಯಾಗಿದ್ದರು. ಒಂದೂವರೆ ವರ್ಷದ ಹಿಂದೆ ಮಗು ಆಗಿತ್ತು.

ಶಶಿ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ವಿಷಯವಾಗಿ ಆಗಾಗ್ಗೆ ದಂಪತಿ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಕವಿತಾ ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿದ್ದರು. ಸೋಮವಾರ ಗಂಡ ಹೊರಗೆ ಹೋಗಿದ್ದ ವೇಳೆ ಕೋಣೆ ಬಾಗಿಲು ಹಾಕಿಕೊಂಡು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬೆಳಿಗ್ಗೆಯೇ ಕೊಲೆ ಮಾಡಿ ಸಂಜೆವರೆಗೂ ಅದೇ ಕೋಣೆಯಲ್ಲಿ ಆಕೆ ಕುಳಿತಿದ್ದು, ಗಂಡ ಶಶಿ ಮನೆಗೆ ಬಂದಾಗ ಮಗುವನ್ನು ಸಾಯಿಸಿರುವ ವಿಷಯ ಬೆಳಕಿಗೆ ಬಂದಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಡ ದುಡಿಯದೇ ಇದ್ದಿದ್ದರಿಂದ ತಾನೇ ಮಗುವಿನ ಕತ್ತು ಹಿಸುಕಿ ಕೊಂದಿರುವೆ ಎಂದೂ ಆಕೆ ಒಪ್ಪಿಕೊಂಡಿದ್ದಾಳೆ.












Click it and Unblock the Notifications