ಕೊಪ್ಪಳ ಮಾವು ಮೇಳ 2025ಕ್ಕೆ ತೆರೆ: ಉತ್ತಮ ಸ್ಪಂದನೆ, ಭರ್ಜರಿ ವಹಿವಾಟು
ಕೊಪ್ಪಳ, ಮೇ 28: ಕೊಪ್ಪಳದಲ್ಲಿ ಆಯೋಜನೆ ಮಾಡಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ-2025ಕ್ಕೆ ತೆರೆ ಬಿದ್ದಿದೆ. ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ 14 ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೇಳದಲ್ಲಿ 2.60 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ.
ಗ್ರಾಹಕರು ಮತ್ತು ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 9ನೇ ವರ್ಷದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಮೇ 13 ರಿಂದ ಮೇ 26ರ ತನಕ ಮೇಳ ಆಯೋಜಿಸಲಾಗಿತ್ತು.

ಮಾವು ಪ್ರದರ್ಶನ ಮತ್ತು ಮಾರಾಟ ಮೇಳ-2025ರ ಸಮಾರೋಪ ಸಮಾರಂಭದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಭಾಗಿಯಾಗಿದ್ದರು. ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕ್ರಪ್ಪ ಸೇರಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಎಷ್ಟು ಹಣ್ಣುಗಳು ಮಾರಾಟ?; ಕೊಪ್ಪಳ ಮಾವು ಮೇಳ 2025 ಹಿಂದೆಂದಿಗಿಂತಲೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿದೆ. 280 ಟನ್‌ಗೂ ಹೆಚ್ಚಿನ ವಿವಿಧ ತಳಿಯ ಮಾವುಗಳನ್ನು ರೈತರು ಮಾರಾಟ ಮಾಡಿದ್ದು, ರೂ. 2.60 ಕೋಟಿಗೂ ಹೆಚ್ಚಿನ ವಹಿವಾಟು ದಾಖಲಾಗಿದೆ. ಮಳೆಯ ನಡುವೆಯೆ ಗ್ರಾಹಕರು ಭಾಗವಹಿಸಿ ಯೋಗ್ಯ ಬೆಲೆಗೆ ಮಾವು ಖರೀದಿಸಿದ್ದಾರೆ.
ಮೇಳದಲ್ಲಿ ರೈತರಿಗೆ ಮಾವಿನ ಬೆಳೆ ಕುರಿತು ವಿವಿಧ ತಾಂತ್ರಿಕ ಮಾಹಿತಿಗಳನ್ನು ನೀಡಲಾಯಿತು ಹಾಗೂ ನೈಸರ್ಗಿಕವಾಗಿ ಮಾವು ಮಾಗಿಸುವ ಕುರಿತು ಎನ್ ರೈಪ್ ಎಂಬ ನೈಸರ್ಗಿಕ ಇಥರೆಲ್ ಪಂಚ್ ಹೋಲ್ ಪಾಕೆಟ್‌ಗಳನ್ನು ಪರಿಚಯಿಸಿ ಹಣ್ಣುಗಳನ್ನು ಮಾಗಿಸುವ ವಿಧಾನವನ್ನು ಸಹ ಇಲಾಖೆಯಿಂದ ತಿಳಿಸಿಕೊಡಲಾಯಿತು.
ಮೇಳದಲ್ಲಿ ಭಾಗವಹಿಸಲು 100ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು. ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ 15ಕ್ಕೂ ಹೆಚ್ಚಿನ ವಿವಿಧ ಮಾವಿನ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದರು. ಮೇಳದಲ್ಲಿ ಕೇಸರ್ ಮತ್ತು ದಶಹರಿ ತಳಿಯ ಮಾವು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು 200 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಅದೇ ರೀತಿ ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಸಕ್ಕರೆ ಗುಟ್ಟಿ, ಖಾದರ್, ಪುನಾಸ್ ಮತ್ತು ಉಪ್ಪಿನಕಾಯಿ ತಳಿ ಸೇರಿದಂತೆ, ವಿವಿಧ ತಳಿಯ ಮಾವಿನ ಹಣ್ಣುಗಳು 80 ಟನ್‌ಗೂ ಹೆಚ್ಚು ಮಾರಾಟವಾಗಿದೆ.
ಮೀಯಾಜಾಕಿ ಮಾವಿನ ಹಣ್ಣಿನ ಹವಾ: ಮೇಳದಲ್ಲಿ 'ಮೀಯಾಜಾಕಿ' ಎಂಬ ಜಗತ್ತಿನ ದುಬಾರಿ ಮಾವಿನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದನ್ನು ನೋಡಲು ಜನರು ಹಾಗೂ ರೈತರು ಕೊಪ್ಪಳ ಮಾತ್ರವಲ್ಲ ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದರು. ಮೇಳದಲ್ಲಿ ರೈತರಿಗೆ ಮೀಯಾಜಾಕಿ ಗಿಡಗಳನ್ನು ಮಾರಾಟಕ್ಕೆ ಇಡಲಾಗಿತ್ತು. 500ಕ್ಕೂ ಹೆಚ್ಚಿನ ಗಿಡಗಳು ಮಾರಾಟವಾದವು.
ಮೇಳದಲ್ಲಿ 'ಕೊಪ್ಪಳ ಕೇಸರ್' ತಳಿಯ ಮಾವಿಗೆ ಹೆಚ್ಚಿನ ಬೇಡಿಕೆ ಇತ್ತು. 2.50 ಕೆಜಿ ತೂಕದ ಕೊಪ್ಪಳ ಕೇಸರ್ ಎಂಬ ಬ್ರಾಂಡ್ ಬಾಕ್ಸ್ 10000ಕ್ಕೂ ಹೆಚ್ಚು ಮಾರಾಟವಾಗಿದೆ. ಬಾಕ್ಸ್‌ಗಳನ್ನು ಬೆಂಗಳೂರು, ದೆಹಲಿ, ಹುಬ್ಬಳ್ಳಿ, ಹೈದರಾಬಾದ್, ಮಂಗಳೂರು ಹಾಗೂ ವಿವಿಧ ನಗರಗಳಿಗೆ ರೈತರು ಪ್ಯಾಕ್ ಮಾಡಿ ಮಾರಾಟ ಮಾಡಿದ್ದಾರೆ.












Click it and Unblock the Notifications