ಕೊಪ್ಪಳ ಜಿಲ್ಲೆಗೆ ನೂತನ ಎಸ್ಪಿ ನೇಮಕ
Koppal New SP: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಗಿದ್ದ ಡಾ.ರಾಮ್ ಎಲ್. ಅರಸಿದ್ದಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ತೆರವಾದ ಸ್ಥಾನಕ್ಕೆ 2018ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದ್ದು, ಹೊಸ ಹುದ್ದೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಹಿಸಿಕೊಳ್ಳಲು ಸಾಹಿಲ್ ಬಾಗ್ಲಾ ಅವರಿಗೆ ಸೂಚಿಸಲಾಗಿದೆ. ಹಾಗಾದ್ರೆ ಇವರ ಶಿಕ್ಷಣ ಹಾಗೂ ಮೂಲ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸಾಹಿಲ್ ಬಾಗ್ಲಾ ಶಿಕ್ಷಣ ಹಾಗೂ ಮೂಲದ ವಿವರ
ಮೂಲತಃ ಪಂಜಾಬ್ ರಾಜ್ಯದವರಾದ ಸಾಹಿಲ್ ಬಾಗ್ಲಾ ಅವರು ಬಿ.ಟೆಕ್ ಪದವೀಧರರಾಗಿದ್ದು, ಕರ್ನಾಟಕ ಕೇಡರ್‌ನ 2018ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು ಈ ಹಿಂದೆ ಬೆಂಗಳೂರು ನಗರದ ಪೂರ್ವ ಸಂಚಾರ ವಿಭಾಗದ ಡಿಸಿಪಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸ್ಥಳ ತೋರಿಸದೆ ಡಾ.ರಾಮ್ ಎಲ್.ಅರಸಿದ್ದಿ ವರ್ಗಾವಣೆ
ಇದಕ್ಕೂ ಮೊದಲು ಧಾರವಾಡ ನಗರದ ಡಿಸಿಪಿಯಾಗಿ ಹಾಗೂ ರಾಜ್ಯ ಗುಪ್ತಚರ ವಿಭಾಗದ ಡಿಸಿಪಿಯಾಗಿಯೂ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಅನುಭವವನ್ನು ಹೊಂದಿದ್ದಾರೆ. ಇನ್ನು ಹಾಲಿ ಎಸ್ಪಿಯಾಗಿದ್ದ ಡಾ.ರಾಮ್ ಎಲ್. ಅರಸಿದ್ದಿ ಅವರಿಗೆ ಸದ್ಯ ಯಾವುದೇ ಹೊಸ ಹುದ್ದೆಯನ್ನು ತೋರಿಸದೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಲವು ಹಂತಗಳಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗಳು ನಡೆದಿವೆ. ಇನ್ನೂ ಆಗಸ್ಟ್ 29, 2026ರಂದು ರಾಜ್ಯ ಸರ್ಕಾರ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಿವಿಧ ಹುದ್ದೆಗಳಿಗೆ ನಿಯೋಜಿಸಿದೆ. ಈ ಬದಲಾವಣೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಳಿಗೂ ಹೊಸ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ನೂತನ ಎಸ್ಪಿಗಳ ನೇಮಕ
* ಭೂಷಣ್ ಗುಲಾಬರಾವ್ ಬೋರಸೆ: ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಭೂಷಣ್ ಗುಲಾಬರಾವ್ ಬೋರಸೆ ಅವರನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
* ನಿಕಮ್ ಪ್ರಕಾಶ್ ಅಮೃತ್: ಹುದ್ದೆಯ ನಿರೀಕ್ಷೆಯಲ್ಲಿದ್ದ 2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ನಿಕಮ್ ಪ್ರಕಾಶ್ ಅಮೃತ್ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಗುಲಾಬ್ ರಾವ್ ಅವರ ಸ್ಥಾನಕ್ಕೆ ನಿಕಮ್ ಪ್ರಕಾಶ್ ನಿಯುಕ್ತಿಗೊಂಡಿದ್ದಾರೆ.
* ಎನ್. ಶಶಿಕುಮಾರ್: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರನ್ನು ವರ್ಗಾಯಿಸಲಾಗಿದ್ದು, ಸದ್ಯಕ್ಕೆ ಯಾವುದೇ ಹೊಸ ಹುದ್ದೆಯನ್ನು ತೋರಿಸಿಲ್ಲ.
* ಪಿ. ಹರಿಶೇಖರನ್: ಬೆಂಗಳೂರಿನ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿಯಾಗಿದ್ದ ಪಿ.ಹರಿಶೇಖರನ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
* ಎಂ.ನಂಜುಂಡಸ್ವಾಮಿ: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿದ್ದ ಎಂ. ನಂಜುಂಡಸ್ವಾಮಿ ಅವರನ್ನು ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗದ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.
* ದೇವಜ್ಯೋತಿ ರೇ: ಮಾನವ ಹಕ್ಕುಗಳ ವಿಭಾಗದಲ್ಲಿದ್ದ ದೇವಜ್ಯೋತಿ ರೇ ಅವರನ್ನು ಬೆಂಗಳೂರಿನ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗಕ್ಕೆ ಎಡಿಜಿಪಿಯಾಗಿ ನಿಯೋಜಿಸಲಾಗಿದೆ.
* ಅಮಿತ್ ಸಿಂಗ್: ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿದ್ದ ಅಮಿತ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗೆ ಐಜಿಪಿಯಾಗಿ ವರ್ಗಾಯಿಸಲಾಗಿದೆ.
* ಚೇತನ್: ಸ್ಥಳ ನಿರೀಕ್ಷೆಯಲ್ಲಿದ್ದ ಆರ್.ಚೇತನ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಡಿಐಜಿಯಾಗಿ ನೇಮಕ ಮಾಡಲಾಗಿದೆ.
* ಕುಶಾಲ್ ಚೌಕ್ಸಿ: ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಕುಶಾಲ್ ಚೌಕ್ಸಿ ಅವರನ್ನು ಬೆಂಗಳೂರಿನ ಡಿಸಿಪಿ ಹುದ್ದೆಗೆ ವರ್ಗಾಯಿಸಲಾಗಿದೆ. ಚೌಕ್ಸಿ ಅವರ ಸ್ಥಾನಕ್ಕೆ ಬೆಂಗಳೂರಿನ ಡಿಸಿಪಿ ಪದ್ಮಿನಿ ಸಾಹು ಅವರನ್ನು ನೇಮಿಸಲಾಗಿದೆ.
* ಡಾ ಶ್ರೀನಿವಾಸ ಗೌಡ: ರಾಮನಗರ ಎಸ್ಪಿ ಆರ್ ಶ್ರೀನಿವಾಸ್ ಗೌಡ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗ 1ರ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.
* ಡಾ ಶಿವಕುಮಾರ್: ಬೆಂಗಳೂರು ಮೆಟ್ರೋಪಾಲಿಟನ್ ರೀಜನ್ ಡೆವಲಪ್ ಮೆಂಟ್ ಅಥಾರಿಟಿ ಟಾಸ್ಕ್ ಫೋರ್ಸ್ ನ ಎಸ್ಪಿಯಾಗಿದ್ದ ಡಾ ಶಿವಕಮಾರ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
* ಸಾಹಿಲ್ ಬಾಗ್ಲಾ: ಕೊಪ್ಪಳ ಜಿಲ್ಲಾ ಎಸ್ಪಿಯಾಗಿ ಸಾಹಿಲ್ ಬಾಗ್ಲಾ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಅವರು ಬೆಂಗಳೂರು ಪೂರ್ವ ವಿಭಾಗದ ಸಂಚಾರ ಡಿಸಿಪಿಯಾಗಿದ್ದರು.
* ರೋಹನ್ ಜಗದೀಶ್: ಗದಗ ಜಿಲ್ಲಾ ಎಸ್ಪಿಯಾಗಿದ್ದ ರೋಹನ್ ಜಗದೀಶ್ ಅರನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಮಿಥುನ್ ಎಚ್ ಎನ್ ಅವರನ್ನು ನೇಮಿಸಲಾಗಿದೆ.
* ಶಿವಪ್ರಕಾಶ್ ದೇವರಾಜು:ಖಾಲಿ ಇದ್ದ ಆ್ಯಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ ಎಸ್ಪಿ ಹುದ್ದೆಗೆ ಶಿವಪ್ರಕಾಶ್ ದೇವರಾಜು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.


Click it and Unblock the Notifications
