Koppal Lok Sabha Election 2024: ಡಾ. ರಾಜಶೇಖರ್ ವಿರುದ್ಧ ಗೆಲ್ತಾರಾ ಬಸವರಾಜ ಹಿಟ್ನಾಳ್?
ಲೋಕಸಭಾ ಚುನಾವಣೆ 2024ರ ಕೊನೆಯ ಹಂತದ ಮತದಾನ ಬಾಕಿ ಉಳಿದಿದ್ದು, ಈಗಾಗಲೇ ಆರು ಹಂತಗಳಲ್ಲಿ ಮತದಾನ ಮುಕ್ತಾಯವಾಗಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದ್ದು, ಮತದಾರರ ಮನದಾಳದಲ್ಲಿ ಏನಿದೆ ಎನ್ನುವುದು ತಿಳಿಯಲಿದೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಾಣೆ ಮತದಾನ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಪ್ಪಳದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಕೊಪ್ಪಳ ಕ್ಷೇತ್ರ ಪರಿಚಯ
ಕೊಪ್ಪಳ, ಕುಷ್ಟಗಿ, ಗಂಗಾವತಿ, ಕನಕಗಿರಿ, ಯಲಬುರ್ಗಾ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಮತ್ತು ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ವಿಧಾನಸಭಾ ಕ್ಷೇತ್ರಗಳು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಮೊದಲು ಕಾಂಗ್ರೆಸ್ ವಶದಲ್ಲಿದ್ದ ಕೊಪ್ಪಳ, ಕಳೆದ ಮೂರು ಚುನಾವಣೆಗಳಿಂದ ಬಿಜೆಪಿ ಪಾಲಾಗಿದೆ.
17 ಬಾರಿ ಚುನಾವಣೆ ನಡೆದಿದ್ದು 9 ಬಾರಿ ಕಾಂಗ್ರೆಸ್, ಮೂರು ಬಾರಿ ಬಿಜೆಪಿ ಗೆದ್ದಿದೆ. 2 ಬಾರಿ ಜೆಡಿಎಸ್ ಗೆದ್ದರೆ, ಮೂರು ಬಾರಿ ಇತರೆ ಪಕ್ಷಗಳು, ಪಕ್ಷೇತರರು ಗೆಲುವು ಸಾಧಿಸಿದ್ದಾರೆ. 1991ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೂಡ ಇಲ್ಲಿಂದ ಸ್ಪರ್ಧೆ ಮಾಡಿ ಸೋತಿದ್ದರು ಎನ್ನುವುದು ವಿಶೇಷ.
ಕಳೆದ ಬಾರಿ ಕಾಂಗ್ರೆಸ್‌ಗೆ ಸೋಲು
2009 ರಿಂದ ಇಲ್ಲಿ ಸತತವಾಗಿ ಮೂರು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಾರೆ. 20019ರಲ್ಲಿ ಶಿವರಾಮೇಗೌಡ ಗೆಲುವು ಸಾಧಿಸಿದ್ದರೆ, 2014 ಮತ್ತು 2019ರಲ್ಲಿ ಸಂಗಣ್ಣ ಕರಡಿ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ವಿರುದ್ಧ 38,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಕಣದಲ್ಲಿ ಯಾರಿದ್ದಾರೆ?
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜಶೇಖರ್ ಹಿಟ್ನಾಳ್ ಅವರೇ ಸ್ಪರ್ಧೆ ಮಾಡಿದ್ದರೆ, ಬಿಜೆಪಿ ಮಾತ್ರ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಜಿಲ್ಲೆಯ ಖ್ಯಾತ ವೈದ್ಯರಾದ ಡಾ. ರಾಜಶೇಖರ್ ಕ್ಯಾವಟೂರು ಅವರು ಬಿಜೆಪಿಯಿಂದ ಟಿಕೆಟ್ ಪಡೆದಿದ್ದು, ಲೋಕಸಭೆ ಪ್ರವೇಶಿಸುವ ಆತ್ಮ ವಿಶ್ವಾಸದಲ್ಲಿದ್ದಾರೆ.
ಮತದಾರರ ವಿವರ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,66,397 ಮತದಾರರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಶೇಕಡಾ 70.99 ರಷ್ಟು ಮತದಾನವಾಗಿದ್ದು, 13,24,898 ಜನ ಮತ ಚಲಾಯಿಸಿದ್ದಾರೆ. ಲಿಂಗಾಯತ, ಕುರುಬರು, ದಲಿತರು ಮತ್ತು ಮುಸ್ಲಿಂ ಮತಗಳು ಇಲ್ಲಿ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕವಾಗಿದೆ.
ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದರೆ, ಹಾಲಿ ಸಂಸದರಿಗೆ ಟಿಕೆಟ್ ಕೊಡದೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿ ನಾಲ್ಕನೇ ಬಾರಿ ಗೆಲ್ಲುವ ಲೆಕ್ಕಾಚಾರದಲ್ಲಿದೆ.












Click it and Unblock the Notifications