ಕೊಪ್ಪಳ; ಶಾಂತಿಯುತ ಮತದಾನ, ಹೊಸ ದಾಖಲೆ
ಕೊಪ್ಪಳ, ಮೇ 11; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸಹ ಮತದಾನ ಮಾಡಿದರು.
ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಮತದಾನ ಮುಕ್ತಾಯದವರೆಗೆ 77.25ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣವು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಶೇ 7.64 ರಷ್ಟು, 11 ಗಂಟೆಯವರೆಗೆ ಶೇ 21.46 ರಷ್ಟು., ಮಧ್ಯಾಹ್ನ 1 ಗಂಟೆಯವರೆಗೆ ಶೇ 39.94 ರಷ್ಟು., ಮಧ್ಯಾಹ್ನ 3 ಗಂಟೆಯವರೆಗೆ ಶೇ 56.45 ರಷ್ಟು, ಸಂಜೆ 5 ಗಂಟೆಯವರೆಗೆ ಶೇ 70.49 ರಷ್ಟು ದಾಖಲಾಗಿತ್ತು.

ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಮತದಾನ ಮುಕ್ತಾಯದ ನಂತರ ಅಂದಾಜು ಶೇ 77.25ರ ರಷ್ಟು ಪ್ರಮಾಣ ದಾಖಲಾಗಿದೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಇದು ದಾಖಲೆಯ ಮತದಾನವಾಗಿದೆ. 2018ರ ಚುನಾವಣೆಯಲ್ಲಿ ಶೇ 76.60 ಮತ್ತು 2008ರ ಚುನಾವಣೆಯಲ್ಲಿ ಶೇ 73.90ರಷ್ಟು ಮತದಾನವಾಗಿತ್ತು.
ಜನರಿಂದಲೂ ಮೆಚ್ಚುಗೆ; 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 1322 ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಮತದಾನ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆದಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರ, ಜಿಲ್ಲಾಡಳಿತದ ಅಗತ್ಯ ಕ್ರಮಗಳಿಂದಾಗಿ ಯಾವುದೇ ಗೊಂದಲ ಉಂಟಾಗಿಲ್ಲ. ಜನರು ಸಹ ಮತದಾನದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬಂದು ಮತದಾನ ಮಾಡಬೇಕು ಎಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಲಿ ಕಲೆ, ಕಿನ್ನಾಳ ಕಲೆ, ತಳಿರು ತೋರಣಗಳು, ಬಲೂನಗಳು, ರಂಗೋಲಿ ಮೂಲಕ ವಿಶೇಷವಾಗಿ ರೂಪಿಸಿದ್ದ 50 ವಿಶೇಷ ಮತಗಟ್ಟೆಗಳು ಜನರನ್ನು ಸೆಳೆದವು.
ಚುನಾವಣಾಧಿಕಾರಿ, ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಕೊಪ್ಪಳ ನಗರದ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿನ ಮತಗಟ್ಟೆ ಸಂಖ್ಯೆ 133 (ಯುವ ಮತಗಟ್ಟೆ)ಯಲ್ಲಿ ಮತದಾರರ ಜೊತೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ನಿಷೇಧಾಜ್ಞೆ ಜಾರಿ; ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಡಲಾಗಿದೆ. ಮತಯಂತ್ರಗಳು ಇರುವ ಕೊಠಡಿಗಳಿಗೆ 3 ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮೇ 13ರ ಶನಿವಾರ ಇಲ್ಲಿಯೇ ಮತದಾನ ನಡೆಯಲಿದೆ.
ಮತ ಎಣಿಕೆ ಹಿನ್ನಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ಮೇ 12ರ ಸಂಜೆ 6ರಿಂದ ಮೇ 13ರ ರಾತ್ರಿ 11 ಗಂಟೆಯವರೆಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಧ್ವನಿವರ್ಧಕಗಳನ್ನು ಹಾಕುವುದು, ಮೆರವಣಿಗೆ, ಸಭೆ, ಪಟಾಕಿಗಳನ್ನು ಸಿಡಿಸುವುದು ಹಾಗೂ ವಿಜಯೋತ್ಸವ ಆಚರಿಸುವ ಸಾಧ್ಯತೆಗಳಿದ್ದು, ಚುನಾವಣೆಯ ಫಲಿತಾಂಶದಿಂದಾಗಿ ಯಾವುದೇ ಘರ್ಷಣೆಗಳು ಉಂಟಾಗದಂತೆ ಹಾಗೂ ಸಾರ್ವಜನಿಕ ಶಾಂತಿಗೆ ಮತ್ತು ಕಾನೂನು ಸುವ್ಯವಸ್ಥಗೆ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆದೇಶದ ಅನ್ವಯ ಮತ ಎಣಿಕಾ ಕೇಂದ್ರವಾದ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು ಆವರಣವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿರುತ್ತದೆ. ಚುನಾವಣಾ ಕರ್ತವ್ಯದಲ್ಲಿ ನಿರತರಾದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಚುನಾವಣಾ ಅಭ್ಯರ್ಥಿಗಳು, ಎಣಿಕಾ ಎಜೆಂಟರು ಹಾಗೂ ಪಾಸ್ ಹೊಂದಿರುವ ಮಾಧ್ಯಮದವರಿಗೆ ಮಾತ್ರ ಮತ ಎಣಿಕಾ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶವಿರುತ್ತದೆ.












Click it and Unblock the Notifications