Karadi Sanganna: ನನಗೆ ಏಳು ಕೋಟಿ ಸಾಲವಿದೆ ಮನೆ ಮಾರುತ್ತೇನೆಂದ ಸಂಗಣ್ಣ ಕರಡಿ!
ಕೊಪ್ಪಳ ಮಾರ್ಚ್ 22: ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಸಂಸದ ಸಂಗಣ್ಣ ಕರಡಿ ಬಂಡಾಯವೇಳುವ ಸಾಧ್ಯತೆ ಇದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆಯಲ್ಲಿ ಅವರು ಇದ್ದಾರೆ. ಈ ಬೆಳವಣಿಗೆಗಳ ನಡುವೆ ತಮಗೆ 7 ಕೋಟಿ ಸಾಲವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೊಪ್ಪಳದಲ್ಲಿ ನಡೆದ ಸ್ವಾಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ನನಗೆ 30 ಕೋಟಿ ರೂಪಾಯಿ ಅಲ್ಲ ಇರುವುದು 7 ಕೋಟಿ ರೂಪಾಯಿ ಸಾಲ ಮಾತ್ರ. ಅದಕ್ಕಾಗಿ ನಾನು ಕೊಪ್ಪಳದಲ್ಲಿರುವ ಮನೆಯನ್ನಾದರೂ ಮಾರುವುದಕ್ಕೂ ಹಿಂಜರಿಯುವುದಿಲ್ಲ ಎಂದಿದ್ದಾರೆ. ನನ್ನ ಮಕ್ಕಳು ಸೇರಿದಂತೆ ಕುಟುಂಬದವರನ್ನು ಕರೆದು ಮಾತನಾಡಿದ್ದೇನೆ, ಅವರಿಗೆ ನಿಮ್ಮ ದಾರಿಯನ್ನು ನೀವು ನೋಡಿಕೊಳ್ಳಿ ಎಂದು ಹೇಳಿದ್ದೇನೆ ಎಂದರು.

ನನ್ನ ಬೆಂಬಲಿಗರು, ಹುತೈಷಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷೇತ್ರರಾಗಿಯಾದರೂ ಕಣಕ್ಕೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ. ನಾಲ್ಕು ದಿನ ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡಿಲ್ಲ. ಡಾ. ಬಸವರಾಜ ಕ್ಯಾವಟರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಸಂಗಣ್ಣ ಕರಡಿ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಟಿಕೆಟ್ ಕೈ ತಪ್ಪಿರುವುದಕ್ಕೆ ಸಂಗಣ್ಣ ಕರಡಿ ಬೇಸಗೊಂಡಿದ್ದಾರೆ. ಪಕ್ಷದ ವರಿಷ್ಠರಿಗೆ ಮೂರು ಪ್ರಶ್ನೆಗಳನ್ನು ಹಾಕಿರುವ ಅವರು, ಉತ್ತರ ನೀಡುವ ತನಕ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ. ಬದಲಿಗೆ ಮಾಜಿ ಶಾಸಕ ಕೆ.ಶರವಣ್ಣಪ್ಪ ಅವರ ಪುತ್ರ ಹಾಗೂ ವೈದ್ಯ ಡಾ.ಕೆ.ಬಸವರಾಜ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಸವರಾಜ ಹೊಸಬರಾಗಿದ್ದು ಇವರ ಹೆಸರು ಘೋಷಣೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ.
ಕೊಪ್ಪಳದ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಕೆಗೆ ಏಪ್ರಿಲ್ 19 ಕೊನೆ ದಿನ. ಏಪ್ರಿಲ್ 20ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 22 ಕೊನೆ ದಿನ. ಆದ್ದರಿಂದ ಸಂಗಣ್ಣ ಕರಡಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಸೊಸೆ ಮಂಜುಳಾ ಕರಡಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಅವರು 54170 ಮತಗಳನ್ನು ಪಡೆದು, ಕಾಂಗ್ರೆಸ್‌ನ ಕೆ. ರಾಘವೇಂದ್ರ ಹಿಟ್ನಾಳ್ (90430 ಮತ) ಸೋಲು ಕಂಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಸಂಗಣ್ಣ ಕರಡಿಗೆ ಟಿಕೆಟ್ ಕೈತಪ್ಪಿದೆ.
ಡಾ. ಬಸವರಾಜ ಕ್ಯಾವಟರ್ ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದ್ದಾರೆ. ಜೆಡಿಎಸ್ ನಾಯಕರು, ಮಾಜಿ ಸಚಿವ ಆನಂದ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಸಂಗಣ್ಣ ಕರಡಿ ಅವರ ನಡೆ ಏನು? ಎನ್ನುವುದು ಖಚಿತವಾಗಿಲ್ಲ. ಆದರೆ ಅವರು ಕಳೆದ ದಿನ ನಡೆದ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಕೆಲ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಸಂಗಣ್ಣ ಕರಡಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ತಾರಾ? ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸದೇ ಉಳಿಯುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications