Gavisiddeshwara Jatra 2023: ಕೊಪ್ಪಳದ ಅಜ್ಜನ ಜಾತ್ರೆಯಲ್ಲಿ ಬಿಸಿ ಬಿಸಿ ಮಿರ್ಚಿ, ಬಜ್ಜಿ ಸವಿದ ಭಕ್ತಸಾಗರ, ಬಾಣಸಿಗರಿಗೆ ಜೈಕಾರ
ಕೊಪ್ಪಳ, ಜನವರಿ, 09: ಮಿರ್ಚಿ- ಮಂಡಕ್ಕಿ ಉತ್ತರ ಕರ್ನಾಟಕ ಮಂದಿಯ ನೆಚ್ಚಿನ ತಿನಿಸಾಗಿದೆ. ಆದರೆ ಹತ್ತಾರು ಜನರಿಗೆ ಮಿರ್ಚಿ ಮಾಡಬೇಕು ಅಂದರೂ ಹೆಣ್ಮಕ್ಕಳು ಅಯ್ಯೋ ಕಷ್ಟ ಹೋಟೆಲ್‌ನಿಂದ ತರಿಸೋಣ ಅಂತಾರೆ. ಆದರೆ ಕೊಪ್ಪಳದಲ್ಲಿ ಅಜ್ಜನ ಜಾತ್ರೆಗೆ ಬಂದಿರುವ ಲಕ್ಷಾಂತರ ಭಕ್ತರಿಗೆ ಬಿಸಿ ಬಿಸಿ ಮಿರ್ಚಿ ಬಜ್ಜಿಯನ್ನು ಪ್ರಸಾದದ ಜೊತೆಗೆ ನೀಡಲಾಯಿತು.
ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರು ಪ್ರಸಾದಕ್ಕಾಗಿ ಸರದಿಯಲ್ಲಿ ನಿಂತಿದ್ದರು. ಮತ್ತೊಂದೆಡೆ ಭಕ್ತರು ಬಿಸಿ ಬಿಸಿ ಮಿರ್ಚಿ ಸವಿಯುತ್ತಿದ್ದರು. ಅಜ್ಜನ ಜಾತ್ರೆ ಎರಡನೇ ದಿನವಾದ್ದರಿಂದ, ಜಾತ್ರೆಗೆ ಸುಮಾರು 2-3 ಲಕ್ಷ ಭಕ್ತರು ಆಗಮಿಸಿದ್ದರು. ಜಾತ್ರೆಯ ಹಲವು ವಿಶೇಷತೆಯಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸವಿಯುವುದೂ ಕೂಡ ಒಂದಾಗಿದೆ.
ಮಿರ್ಚಿ, ಬಜ್ಜಿ ಸವಿದ ಭಕ್ತಗಣ
ಕಳೆದ ಐದಾರು ವರ್ಷಗಳಿಂದ ಮಹಾ ದಾಸೋಹದ ಎರಡನೇ ದಿನ ಊಟದಲ್ಲಿ ಮಿರ್ಚಿ ಬಜ್ಜಿಯನ್ನ ಭಕ್ತರಿಗೆ ನೀಡಲಾಗುತ್ತಿದೆ. ಈ ಬಾರಿ ಬರೋಬ್ಬರಿ 25 ಕ್ಷಿಂಟಾಲ್ ಕಡ್ಲೆ ಹಿಟ್ಟು, 9 ಬ್ಯಾರೆಲ್ ಅಡುಗೆ ಎಣ್ಣೆ, 15 ಕ್ವಿಂಟಾಟ್ ಹಸಿಮೆಣಸಿನಕಾಯಿಯ ತಂದು ಬಜಿ ಮಾಡಲಾಗಿತ್ತು. ಬೆಳ್ಳಂ ಬೆಳಗ್ಗೆ ಬರೋಬ್ಬರಿ 200ಕ್ಕೂ ಹೆಚ್ಚು ಬಾಣಸಿಗರು ಮಿರ್ಚಿ ಮಾಡುವುದರಲ್ಲಿ ಕಾರ್ಯನಿರತರಾಗಿದ್ದರು.

ಅಜ್ಜನ ಜಾತ್ರೆಗೆ ಹರಿದು ಬಂತು ಭಕ್ತಸಾಗರ
ಸಾಮಾನ್ಯವಾಗಿ ಮದುವೆಗೆ ಸ್ವಲ್ಪ ತಡವಾಗಿ ಹೋದರೂ ಊಟದಲ್ಲಿ ಮಿರ್ಚಿ ಸಿಗುವುದಿಲ್ಲ. ಯಾಕಂದರೆ ಐದಾರು ಸಾವಿರ ಜನರಿಗೆ ಮಿರ್ಚಿ ಮಾಡುವುದೂ ಕೂಡ ಕಷ್ಟ ಸಾಧ್ಯವಾಗುತ್ತದೆ. ಆದರೆ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಜನರಿಗೆ ಮಿರ್ಚಿ ತಯಾರಿಸುವುದೆಂದರೆ ಸಾಮಾನ್ಯ ಮಾತಲ್ಲ. ಅದಕ್ಕಾಗಿ ಶ್ರೀಮಠದ ಸ್ವಯಂ ಸೇವಕರು ಎರಡು ದಿನದ ಮೊದಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ. ಬರೊಬ್ಬರಿ 200 ಬಾಣಸಿಗರಿಂದ ಮಿರ್ಚಿ ರೆಡಿಯಾಗುತ್ತವೆ. ಇನ್ನು ಸೋಮವಾರವೂ ಕೂಡ ಬೆಳಗ್ಗೆಯಿಂದಲೇ ಭಕ್ತರ ದಂಡು ಮಠದತ್ತ ಹರಿದು ಬಂದಿತ್ತು. ಭಾನವಾರವೂ ಸಹ ರಥೋತ್ಸವ ಆದ್ದರಿಂದ ಜನಸಾಗರವೇ ಸೇರಿತ್ತು.
ಅಜ್ಜನ ಜಾತ್ರೆಯ ಮಹಾ ದಾಸೋಹದಲ್ಲಿ ಪ್ರತಿ ದಿನವೂ ಭಕ್ತರು ವಿಶೇಷ ಖಾದ್ಯ ಸೇವಿಸುತ್ತಾರೆ. ಮಿರ್ಚಿ ರುಚಿ ಸವಿದ ಭಕ್ತರು, ಗವಿಸಿದ್ದೇಶ್ವರ ಜಾತ್ರೆ ಕೇವಲ ದಕ್ಷಿಣದ ಕುಂಭಮೇಳ ಅಂತಾ ಮಾತ್ರ ಪ್ರಸಿದ್ದವಲ್ಲ, ದಾಸೋಹಕ್ಕೂ ಪ್ರಸಿದ್ಧಿ ಅಂತಾ ಜೈಕಾರ ಹಾಕಿದರು. ಮಂಗಳವಾರವೂ ಕೂಡ ಜಾತ್ರೆ ಇದ್ದು, ವಿವಿಧ ಕಾರ್ಯಕ್ರಮಗಳ ಜೊತೆ ಲಕ್ಷಾಂತರ ಭಕ್ತರು ಆಗಮಸುವ ಸಾದ್ಯತೆ ಇದೆ.












Click it and Unblock the Notifications