ಗಂಗಾವತಿಯಲ್ಲಿ ಸಕ್ರಿಯರಾದ ಜನಾರ್ದನ ರೆಡ್ಡಿ: ಡಿ. 25ರಂದು ಮಹತ್ವದ ಘೋಷಣೆ
ಕೊಪ್ಪಳ, ಡಿಸೆಂಬರ್ 22: ಗೃಹ ಪ್ರವೇಶದ ನಂತರ ಮೊದಲ ಬಾರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿಗೆ ಆಗಮಿಸಿದ್ದು, ಟಂಪಲ್ ರನ್ ಮುಂದುವರೆಸಿದ್ದಾರೆ. ಗುರುವಾರ ದೇವಸ್ಥಾನದ ಮತ್ತು ದರ್ಗಾಕ್ಕೆ ಭೇಟಿ ನೀಡಿರುವ ಜನಾರ್ದನ ರೆಡ್ಡಿ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ದೆಹಲಿ ಪ್ರವಾಸದ ನಂತರ ರಾಜ್ಯಾದ್ಯಂತ ಓಡಾಡುತ್ತಿರುವ ಜನಾರ್ದನ ರೆಡ್ಡಿ ಗುರುವಾರ ಗಂಗಾವತಿಗೆ ಆಗಮಿಸಿದ್ದಾರೆ. ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಬಿಜೆಪಿ ಸ್ಥಳೀಯ ಮುಖಂಡರ ಜೊತೆ ಕಾಣಿಸಿಕೊಂಡರು. ಗುರುವಾರ ಸಂಜೆ ಜನಾರ್ದನ ರೆಡ್ಡಿ ಗಂಗಾವತಿಯ ಕರ್ನೂಲ್ ಬಾಬಾ ದರ್ಗಾ ಸೇರಿ ವಿವಿಧ ಮಸೀದಿಗೆ ಭೇಟಿ ನೀಡಿದರು. ಜೊತೆಗೆ ಮುಸ್ಲಿಂ ಮುಖಂಡರೊಬ್ಬರ ಗೃಹ ಪ್ರವೇಶದಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲೂ ಗೊಂದಲ ಸೃಷ್ಟಿಸಿದ್ದಾರೆ.
ಜನಾರ್ದನ ರೆಡ್ಡಿಯ ಇಂದಿನ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜಕೀಯ ಕುರಿತು ಎಲ್ಲಾ ಪ್ರಶ್ನೆಗಳಿಗೂ ಡಿಸೆಂಬರ್ 25ರ ಕಡೆ ಕೈ ತೋರಿಸಿರುವ ಜನಾರ್ದನ ರೆಡ್ಡಿ, ನಾನು ಇಲ್ಲೇ ಇರುತ್ತೇನೆ ಎನ್ನುವ ಮೂಲಕ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಸುಳಿವು ಬಿಟ್ಟುಕೊಟ್ಡಿದ್ದಾರೆ.

ಜನಾರ್ದನ ರೆಡ್ಡಿ ಬುಧವಾರ ರಾತ್ರಿಯೇ ಗಂಗಾವತಿಗೆ ಆಗಮಿಸಿದ್ದ ಸುದ್ದಿ ತಿಳಿದ ನೂರಾರು ಯುವಕರು ಬೆಳಗ್ಗೆ ಹೊಸ ಮನೆ ಮುಂದೆ ಜಮಾಯಿಸಿದ್ದರು. ಜನಾರ್ದನ ರೆಡ್ಡಿ ದರ್ಗಾಕ್ಕೆ ಭೇಟಿ ನೀಡುವ ವೇಳೆ ಗಂಗಾವತಿಯ ಬಿಜೆಪಿ ಮುಖಂಡರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಸಾತ್ ನೀಡಿದ್ದಾರೆ.
ದೇವಸ್ಥಾನದ ಭೇಟಿ ನಂತರ ಮನೆಗೆ ಆಗಮಿಸಿದ ಜನಾರ್ದನ ರೆಡ್ಡಿ ರಾಯಚೂರು ಜಿಲ್ಲೆಯ ಮಾನ್ವಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಜೆಡಿಎಸ್ ಶಾಸಕರ ದಿಢೀರ್ ಭೇಟಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಆದರೆ ಜನಾರ್ದನ ರೆಡ್ಡಿ ಮಾತ್ರ ನನ್ನ ರಾಜಕೀಯ ನಡೆ ಏನು ಎಂದು ಡಿಸೆಂಬರ್ 25ಕ್ಕೆ ತಿಳಿಸುತ್ತೇನೆ ಎಂದಿದ್ದಾರೆ.
ಬುಧವಾರ ರಾತ್ರಿಯೂ ಜನಾರ್ದನ ರೆಡ್ಡಿ ಗಂಗಾವತಿಯ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರ ನಡೆ ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸೂಚನೆ ನೀಡಿದ್ದು, ಯಾವ ಪಕ್ಷದತ್ತ ಗಣಿಧಣಿ ಒಲವು ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications