ದುರ್ಗಾ ಜಾತ್ರೆಯಲ್ಲಿ ದಲಿತ ವ್ಯಕ್ತಿ ಮೇಲೆ ಹಲ್ಲೆ: ಘರ್ಷಣೆಯಲ್ಲಿ ಎಂಟು ಮಂದಿಗೆ ಗಾಯ
ಆಕ್ರೋಶಗೊಂಡ ದಲಿತರು ಬುಧವಾರ ಹಿಟ್ನಾಳ್‌ನಿಂದ ಮುನಿರಾಬಾದ್ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು.
ಕೊಪ್ಪಳ, ಫೆಬ್ರವರಿ. 17: ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಲಿತ ಮತ್ತು ಮೇಲ್ಜಾತಿ ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಹಿಟ್ನಾಳ್ ಗ್ರಾಮದಲ್ಲಿ ನಡೆದ ದುರ್ಗಾ ಜಾತ್ರೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಇದ್ದ ಕಡೆ ಜೋರಾಗಿ ಆಟಿಕೆ ಪೀಪಿ ಉದಿದರು ಎಂದು ಆರೋಪಿಸಿ 31 ವರ್ಷದ ಮುದಿಯಪ್ಪ ಎಂಬುವ ದಲಿತ ವ್ಯಕ್ತಿಯ ಮೇಲೆ ಮೇಲ್ಜಾತಿ ಮತ್ತು ಮುಸ್ಲಿಂ ಸಮುದಾಯದ ಜನರು ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ದಲಿತ ಸಮುದಾಯ ಮತ್ತು ಮೇಲ್ಜಾತಿ ಜನರ ನಡುವೆ ಘರ್ಷಣೆಗೆ ಕಾರಣವಾಯಿತು. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ರಾಮದ ದಲಿತ ಸಮುದಾಯದವರ ಪ್ರದೇಶಕ್ಕೆ ನುಗ್ಗಿದ ಮೇಲ್ಜಾತಿ ಜನರ ಗುಂಪೊಂದು ಮುದಿಯಪ್ಪ ಅವರ ಕುಟುಂಬ ಮತ್ತು ಜಗಳ ತಡೆಯಲು ಬಂದ ದಲಿತರ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮುನಿರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ದಲಿತರು ಬುಧವಾರ ಹಿಟ್ನಾಳ್‌ನಿಂದ ಮುನಿರಾಬಾದ್ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು.
ಇದೇ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ್ ಪೊಲೀಸ್ ಠಾಣೆಗೆ ಧಾವಿಸಿ ಪ್ರತಿಭಟನಾ ನಿರತ ದಲಿತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಅಲ್ಲದೇ ಎರಡು ಸಮುದಾಯದವರನ್ನು ಒಗ್ಗೂಡಿಸಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ಗ್ರಾಮಸ್ಥರು ತಿಳಿಸಿದರು.
ಘಟನೆ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಇದೇ ತಿಂಗಳ ಆರಂಭದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಫೆಬ್ರವರಿ 3 ರಂದು ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ದಲಿತ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಪೊಲೀಸರ ಪ್ರಕಾರ, ಶೋಬಮ್ಮ ಎಂಬ ಮಹಿಳೆ ತನ್ನ ಹಸು ಅಮರೇಶ್ ಕುಂಬಾರ್ ಅವರ ಜಮೀನಿಗೆ ಹೋಗಿದ್ದು ಗಮನಿಸಿ, ವಾಪಸ್ ತಲೆದು ತರಲು ಹೋಗಿದ್ದರು. ತಮ್ಮ ಜಮೀನಿನಲ್ಲಿ ಕಾಲಿಟ್ಟ ಶೋಬಮ್ಮ ಮೇಲೆ ಕೋಪಗೊಂಡ ಅಮರೇಶ್ ಕುಂಬಾರ್ ಮಹಿಳೆಯನ್ನು ತನ್ನ ಮನೆಯ ಮುಂದೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾನೆ. ಆಕೆಯನ್ನು ಚಪ್ಪಲಿಯಿಂದ ಹೊಡೆದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕನಕಗಿರಿ ಪೊಲೀಸರು ಅಮರೇಶ್ ಕುಂಬಾರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಿಸಿದ್ದಾರೆ.












Click it and Unblock the Notifications