ಕೊಪ್ಪಳ; ತಡರಾತ್ರಿ ಬಾಡೂಟ, ಚುನಾವಣಾಧಿಕಾರಿಗಳ ದಾಳಿ
ಕೊಪ್ಪಳ, ಏಪ್ರಿಲ್ 11; ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಆಯೋಗ ಹಲವು ಕ್ರಮ ಕೈಗೊಂಡಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಎನ್. ಜರಕುಂಟೆ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೇ ತಡರಾತ್ರಿ 250 ಜನರಿಗೆ ಬಾಡೂಟ ಮಾಡಿಸುತ್ತಿದ್ದ ಸ್ಥಳದ ಮೇಲೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ಮತ್ತು ಎಫ್‌ಎಸ್ ತಂಡದ ಅಧಿಕಾರಿಗಳು ದಾಳಿ ನಡೆಸಿದರು. 7,430 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.

ಯಲಬುರ್ಗಾ ತಾಲೂಕಿನ ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್. ಜರಕುಂಟಿ ಗ್ರಾಮದ ಶರಣಗೌಡ ಹನುಮಗೌಡ ಪೊಲೀಸ್ ಪಾಟೀಲ್ ಎಂಬುವವರು ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಆಮಿಷವೊಡ್ಡಿ ತಮ್ಮ ಜಮೀನಿನಲ್ಲಿ 250 ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಾದರಿ ನೀತಿ ಸಂಹಿತೆ ಅಧಿಕಾರಿಗಳಾದ ಯಲಬುರ್ಗಾ ತಹಶೀಲ್ದಾರರು ಮತ್ತು ಎಫ್‌ಎಸ್ ತಂಡದ ಅಧಿಕಾರಿಗಳು, ಬೇವೂರ ಪಿಎಸ್‌ಐ ಹಾಗೂ ಅವರ ತಂಡದೊಂದಿಗೆ ದಿಢೀರ್ ದಾಳಿ ನಡೆಸಲಾಗಿದೆ.
ಆಗ ಸ್ಥಳದಲ್ಲಿದ್ದ 7,430 ರೂಪಾಯಿ ಮೌಲ್ಯದ ಅಡುಗೆ ಪಾತ್ರೆ, ಅಕ್ಕಿ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಚುನಾವಣಾ ಪ್ರಚಾರದಲ್ಲಿ ಊಟ ಕೊಡಿಸಿದರೂ ತಪ್ಪು, ಬಾಡೂಟ ಹಾಕಿಸುವುದು ಸಹ ಅಪರಾಧವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರವಾನಿಗೆ ಪಡೆಯದೇ ಯಾವುದೇ ರೀತಿಯ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಸುವಂತಿಲ್ಲ. ಪೋಸ್ಟರ್, ಬ್ಯಾನರ್ ಅಳವಡಿಸಲು ಹಾಗೂ ಗೋಡೆಬರಹಕ್ಕೆ ಅವಕಾಶವಿರುವುದಿಲ್ಲ. ಪ್ರಚಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ.

ನಿರಂತರ ಕಾರ್ಯಾಚರಣೆ; ವಿಧಾನಸಭಾ ಚುನಾಚಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಒಟ್ಟು 83 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಮಾರ್ಚ್ 29ರಿಂದ ಏಪ್ರಿಲ್ 9ರವರೆಗೆ ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಒಟ್ಟು 83 ಪ್ರಕರಣಗಳು ದಾಖಲಾಗಿದ್ದು, ಸುಮಾರು 452.490 ಲೀಟರ್ ಮದ್ಯ, ಬಿಯರ್ 17.900 ಲೀಟರ್ ಹಾಗೂ 18 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 12 ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಮದ ನಗದು, ಮದ್ಯ, ಉಡುಗೊರೆ ಮತ್ತಿತರ ವಸ್ತುಗಳ ಅಕ್ರಮ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಲಾಗಿದೆ. ಅಕ್ರಮ ಸಾಗಾಣಿಕೆ ವೇಳೆ ವಶಪಡಿಸಿಕೊಂಡ ವಸ್ತುಗಳ ಮೇಲೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಭಾವಚಿತ್ರಗಳಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಭಾವಚಿತ್ರವಿರುವ ಅಥವಾ ಪಕ್ಷದ ಚಿಹ್ನೆ ಕಂಡುಬಂದಾಗ ಸಂಬಂಧಿಸಿದವರನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗುತ್ತಿದೆ. ವಾಹನ ಚಾಲಕರು ಮತ್ತಿತರ ವ್ಯಕ್ತಿಗಳನ್ನು ಎರಡು, ಮೂರನೇ ಆರೋಪಿಗಳಾಗುತ್ತಾರೆ.
ಕಲ್ಯಾಣ ಮಂದಿರ, ಧಾರ್ಮಿಕ ಸ್ಥಳಗಳು, ಪ್ರವಾಸಿಮಂದಿರದ ಕೊಠಡಿಗಳನ್ನು ತೆರವುಗೊಳಿಸಿ ಸಂಬಂಧಿಸಿದ ಚುನಾವಣಾಧಿಕಾರಿಗಳ ಸುಪರ್ದಿಗೆ ಪಡೆದುಕೊಳ್ಳಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಅಥವಾ ಸಭೆಗಳಿಗೆ ಅವಕಾಶ ನೀಡುತ್ತಿಲ್ಲ. ಮಾದರಿ ನೀತಿಸಂಹಿತೆ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.












Click it and Unblock the Notifications