ನೇತಾಜಿ ಜನ್ಮದಿನದಂದು ರಾಷ್ಟ್ರೀಯ ರಜೆ ಘೋಷಿಸಲು ಕೇಂದ್ರಕ್ಕೆ ಮಮತಾ ಮನವಿ
ಕೋಲ್ಕತ್ತಾ, ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು ಸಂಭ್ರಮಾಚರಣೆಯಲ್ಲಿ ನಮನ ಸಲ್ಲಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೇತಾಜಿ ಜನ್ಮದಿನವಾದ ಜನವರಿ 23 ಅನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನೇತಾಜಿ ಸುಭಾಷ್ ಚಂದ್ರ ಬೋಸ್, "ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ನಾವು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಇಡೀ ರಾಷ್ಟ್ರವು ರಾಷ್ಟ್ರೀಯ ನಾಯಕರಿಗೆ ಗೌರವ ಸಲ್ಲಿಸಲು ಮತ್ತು #DeshNayakDibas ಅನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಆಚರಿಸಲು ಅನುವು ಮಾಡಿಕೊಡುತ್ತದೆ," ಎಂದು ಹೇಳಿದ್ದಾರೆ.
ಈ ಹಿಂದೆಯೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವು ಬಾರಿ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ವರ್ಷವೂ ಇಡೀ ರಾಷ್ಟ್ರವು ರಾಷ್ಟ್ರೀಯ ನಾಯಕನಿಗೆ ಗೌರವ ಸಲ್ಲಿಸಲು ಮತ್ತು #DeshNayakDibas ಅನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಆಚರಿಸಲು ಅವಕಾಶ ನೀಡುವಂತೆ ವಿನಂತಿ ಮಾಡಿದ್ದಾರೆ.

"ಪಶ್ಚಿಮ ಬಂಗಾಳ ಸರ್ಕಾರವು ತನ್ನ 125 ನೇ ಜನ್ಮ ವಾರ್ಷಿಕೋತ್ಸವವನ್ನು #DeshNayakDibas ಎಂದು ರಾಜ್ಯದಾದ್ಯಂತ ಮಾರ್ಗಸೂಚಿಗಳನ್ನು ಅನುಸರಿಸಿ ಸೂಕ್ತ ರೀತಿಯಲ್ಲಿ ಆಚರಿಸುತ್ತಿದೆ," ಎಂದು ಮುಖ್ಯಮಂತ್ರಿ ಬರೆದಿದ್ದಾರೆ. "ನೇತಾಜಿ ದೇಶಭಕ್ತಿ, ಧೈರ್ಯ, ನಾಯಕತ್ವ, ಏಕತೆ ಮತ್ತು ಭ್ರಾತೃತ್ವದ ದ್ಯೋತಕರಾಗಿದ್ದಾರೆ. ನೇತಾಜಿ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಮುಂದುವರಿಯುತ್ತಾರೆ," ಎಂದು ತಿಳಿಸಿದ್ದಾರೆ.
ಈ ರಾಷ್ಟ್ರೀಯ ನಾಯಕನಿಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನೇತಾಜಿ ಸ್ಮರಣಾರ್ಥ ಕೆಲವು ದೀರ್ಘಾವಧಿಯ ಕಾರ್ಯಕ್ರಮಗಳ ನಡುವೆ 100 ಪ್ರತಿಶತ ರಾಜ್ಯ ನಿಧಿಯೊಂದಿಗೆ ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ರಾಷ್ಟ್ರೀಯ ವಿಶ್ವವಿದ್ಯಾಲಯ, ಜೈ ಹಿಂದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ," ಎಂದು ಹೇಳಿದ್ದಾರೆ.
ಬಂಗಾಳ ಯೋಜನಾ ಆಯೋಗ ಸ್ಥಾಪನೆ ಬಗ್ಗೆ ಮಾಹಿತಿ
"ರಾಷ್ಟ್ರೀಯ ಯೋಜನಾ ಆಯೋಗದ ಕುರಿತು ನೇತಾಜಿಯವರ ಆಲೋಚನೆಗಳಿಂದ ಸ್ಫೂರ್ತಿ ಪಡೆದು, ಅದರ ಯೋಜನಾ ಕ್ರಮಗಳನ್ನು ಕೈಗೊಂಡು ರಾಜ್ಯಕ್ಕೆ ಸಹಾಯ ಮಾಡಲು ಬಂಗಾಳ ಯೋಜನಾ ಆಯೋಗವನ್ನು ಸ್ಥಾಪಿಸಲಾಗುವುದು," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ತಿರಸ್ಕಾರ
ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಕುರಿತ ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ಕೇಂದ್ರವು ತಿರಸ್ಕರಿಸಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಭಾನುವಾರ ಪತ್ರ ಬರೆದಿದ್ದರು. ಸುಭಾಷ್ ಚಂದ್ರ ಬೋಸ್ ಕುರಿತ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿದ ವಿಚಾರದಲ್ಲಿ ಆಶ್ಚರ್ಯವನ್ನು ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಪಶ್ಚಿಮ ಬಂಗಾಳ ಸರ್ಕಾರದ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‌ನಿಂದ ಹಠಾತ್ತನೆ ಹೊರಗಿಡುವ ಭಾರತ ಸರ್ಕಾರದ ನಿರ್ಧಾರದಿಂದ ನನಗೆ ನೋವಾಗಿದೆ," ಎಂದು ಹೇಳಿದ್ದರು.
"ಯಾವುದೇ ಕಾರಣಗಳು ಅಥವಾ ಸಮರ್ಥನೆಗಳನ್ನು ನೀಡದೆ ಸರ್ಕಾರವು ನಮ್ಮ ರಾಜ್ಯದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವುದು ನಮಗೆ ಇನ್ನಷ್ಟು ಗೊಂದಲದ ಸಂಗತಿಯಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಅವರ ಐಎನ್‌ಎಯನ್ನು ನೇತಾಜಿಯ 125 ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಿಂದಾಗಿ ನಮ್ಮ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ನಾವು ತಯಾರಿ ಮಾಡಿದ್ದೇವೆ. ಈ ದೇಶದ ಸುಪ್ರಸಿದ್ಧ ಪುತ್ರರು ಮತ್ತು ಪುತ್ರಿಯರಾದ ಈಶ್ವರಚಂದ್ರ ವಿದ್ಯಾಸಾಗರ್, ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ, ದೇಶಬಂಧು ಚಿತ್ತರಂಜನ್ ದಾಸ್, ಶ್ರೀ ಅರಬಿಂದೋ, ಮಾತಂಗಿನಿ ಹಜ್ರಾ, ನಜ್ರುಲ್, ಬಿರ್ಸಾ ಮುಂಡಾ ಮತ್ತು ಅನೇಕ ದೇಶಭಕ್ತರ ಚಿತ್ರಗಳು ಅದರಲ್ಲಿ ಇದ್ದವು," ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications