ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ: ವರದಿ ಕೋರಿದ ಚುನಾವಣಾ ಆಯೋಗ
ಕೋಲ್ಕತ್ತಾ, ಮಾರ್ಚ್.10: ಪಶ್ಚಿಮ ಬಂಗಾಳದ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ದಿನವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವರದಿ ಕೋರಿದೆ.
ನಂದಿಗ್ರಾಮ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ದಿನದ ಘಟನೆ ಮತ್ತು ಭದ್ರತಾ ವೈಫಲ್ಯದ ಕುರಿತು ಸಂಪೂರ್ಣ ವರದಿ ನೀಡುವಂತೆ ಚುನಾವಣಾ ಆಯೋಗವು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳದ ಬಿರುಲಿಯಾ ಬಜಾರ್‌ನಲ್ಲಿ ಸ್ಥಳೀಯರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತರು ನನ್ನನ್ನು ತಳ್ಳಿದ್ದರಿಂದ ನನ್ನ ಕಾಲಿಗೆ ಗಾಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಘಟನೆ ಬಳಿಕ ಗಾಯಗೊಂಡ ಅವರನ್ನು ಕೋಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications