ದೀದಿಗೆ ಆಘಾತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯತ್ತ ಟಿಎಂಸಿ ಶಾಸಕ?
ಕೋಲ್ಕತ್ತಾ, ಜನವರಿ.20: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಒಡೆದ ಮನೆ ಆಗುತ್ತಿದೆ. ಸದ್ಯದಲ್ಲೇ ಮತ್ತೊಬ್ಬ ಟಿಎಂಸಿ ಶಾಸಕ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬುಧವಾರ ನವದೆಹಲಿಯಲ್ಲಿ ನಾಡಿಯಾ ಸಾಂತಿಪೂರ್ ವಿಧಾನಸಭಾ ಕ್ಷೇತ್ರದ ಶಾಸಕ ಅರಿಂದಮ್ ಭಟ್ಟಾಚಾರ್ಯ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ಹಿನ್ನೆಲೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಟಿಎಂಸಿಗೆ ನುಂಗಲಾಗದ ತುತ್ತಾಗಿದೆ. ಮಂಗಳವಾರವಷ್ಟೇ ಬಿಜೆಪಿಗೆ ಹೋಗವವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. "ಯಾರು ಬಿಜೆಪಿಗೆ ಹೋಗಲು ಬಯಸುತ್ತೀರೋ ಎಲ್ಲರೂ ಹೋಗಬಹುದು. ಆದರೆ, ನಾನು ಮಾತ್ರ ಯಾವುದೇ ಕಾರಣಕ್ಕೂ ಕೇಸರಿ ಪಕ್ಷದ ಎದುರಿಗೆ ತಲೆ ತಗ್ಗಿಸಿ ನಿಲ್ಲುವುದಿಲ್ಲ" ಎಂದು ಕಿಡಿ ಕಾರಿದ್ದಾರೆ.

"ಟಿಎಂಸಿಯ 41 ಶಾಸಕರು ಬಿಜೆಪಿಗೆ":
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಆಘಾತ ನೀಡುವಂತಾ ಸುದ್ದಿಯೊಂದನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದರು. "ಮಮತಾ ಬ್ಯಾನರ್ಜಿ ಸರ್ಕಾರವನ್ನು ಬೆಂಬಲಿಸುತ್ತಿರುವ 41 ಟಿಎಂಸಿ ಶಾಸಕರು ಇದೀಗ ಬಿಜೆಪಿ ಸೇರುವುದಕ್ಕೆ ಇಚ್ಛಿಸುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಈ 41 ಶಾಸಕರ ಪಟ್ಟಿಯಲ್ಲಿ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎನ್ನುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ತದನಂತರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದರು.
ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಆಪ್ತ ವಲಯದಲ್ಲಿ ಶಾಸಕ ಸುವೆಂದು ಅಧಿಕಾರಿ ಗುರುತಿಸಿಕೊಂಡಿದ್ದರು. ಕಳೆದ ಸೋಮವಾರವಷ್ಟೇ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಲ್ಲದೇ, ತಮ್ಮ ಭದ್ರಕೋಟೆಯಲ್ಲಿ ಸ್ಪರ್ಧಿಸುವಂತೆ ಸ್ವತಃ ದೀದಿಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ನಾನು ಸಾಧ್ಯವಾದಲ್ಲಿ ನಂದಿಗ್ರಾಮ್ ಮತ್ತು ಭಾವನಿಪೋರ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.












Click it and Unblock the Notifications