ಅಕ್ರಮ ವಲಸಿಗ ಹಿಂದೂಗಳ ಗಡಿಪಾರು ಇಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್
ನವದೆಹಲಿ, ಸೆಪ್ಟೆಂಬರ್ 23: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಲ್ಲಿ ಹಿಂದೂಗಳ ಹೆಸರು ಬಿಟ್ಟುಹೋಗಿದ್ದರೂ ಅವರನ್ನು ದೇಶದಿಂದ ಗಡಿಪಾರು ಮಾಡುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಭರವಸೆ ನೀಡಿದ್ದಾರೆ.
ಕೋಲ್ಕತಾದಲ್ಲಿ ಭಾನುವಾರ ಬಿಜೆಪಿ ಮತ್ತು ಸಂಘದ ನಡುವೆ ನಡೆದ ಗೋಪ್ಯ ಸಭೆಯಲ್ಲಿ ಮಾತನಾಡಿದ ಭಾಗ್ವತ್ ಅವರು ಹಿಂದೂಗಳು ಭಯಪಡಬೇಕಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಅಸ್ಸಾಂನಲ್ಲಿ ಆಗಸ್ಟ್ 31ರಂದು ಎನ್ಆರ್‌ಸಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಹೆಸರು ಕೈತಪ್ಪಿರುವ ಹಿಂದೂಗಳು ಕೂಡ ದೇಶದಿಂದ ಗಡಿಪಾರಾಗುವ ಭಯ ವ್ಯಕ್ತಪಡಿಸಿದ್ದಾರೆ ಎನ್ನುವುದು ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಅಂತಿಮ ಪಟ್ಟಿಯಲ್ಲಿ 19 ಲಕ್ಷ ಜನರನ್ನು ಕೈಬಿಡಲಾಗಿದ್ದು, ಅದರಲ್ಲಿ ಅನೇಕರು ಬಂಗಾಳಿ ಹಿಂದೂಗಳಿದ್ದಾರೆ.

'ಒಬ್ಬನೇ ಒಬ್ಬ ಹಿಂದೂ ದೇಶದಿಂದ ಹೊರಹೋಗದಂತೆ ಆಗಬಾರದು ಎಂದು ಮೋಹನ್ ಭಾಗ್ವತ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬೇರೆ ದೇಶಗಳಲ್ಲಿ ಹಿಂಸೆಗೊಳಗಾಗಿ, ಶಿಕ್ಷೆ ಅನುಭವಿಸಿ ಬಂದ ಹಿಂದೂಗಳು ಇಲ್ಲಿಯೇ ಇರಲಿದ್ದಾರೆ' ಎಂದು ಆರೆಸ್ಸೆಸ್ ಸದಸ್ಯರೊಬ್ಬರು ತಿಳಿಸಿದ್ದಾರೆ.
ಅಕ್ರಮ ವಲಸಿಗರನ್ನು ಗುರುತಿಸಲು ಆಂದೋಲನ ನಡೆಸಿರುವ ಆರೆಸ್ಸೆಸ್, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ತರುವಂತೆ ಕೂಡ ಒತ್ತಾಯಿಸಿದೆ.
ಕಿರುಕುಳಕ್ಕೆ ಒಳಗಾದ ಹಿಂದೂಗಳಿಗೆ ಪೌರತ್ವ ನೀಡಬೇಕೆಂದು ಆಗ್ರಹಿಸಿರುವ ಆರೆಸ್ಸೆಸ್, ಹಿಂದೂ ಸಮುದಾಯಕ್ಕೆ ಇರುವ ಏಕೈಕ ಜಾಗ ಭಾರತವಾಗಿದೆ ಎಂದು ಪ್ರತಿಪಾದಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎನ್ಆರ್‌ಸಿ ಹೊರಬರುವುದಕ್ಕೂ ಮುನ್ನ ಪೌರತ್ವ (ತಿದ್ದುಪಡಿ) ಮಸೂದೆ ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖಂಡರು ಮತ್ತು ಕೆಲವು ನಾಯಕರು ಒತ್ತಿಹೇಳಿದ್ದಾರೆ.
'ಬಂಗಾಳದಲ್ಲಿ ಸಿಎಬಿ ಮೊದಲು ಜಾರಿಯಾಗಲಿದೆ. ಬಳಿಕ ಎನ್‌ಆರ್‌ಸಿಯನ್ನು ತರಲಾಗುವುದು. ರಾಜ್ಯದಲ್ಲಿರುವ ಹಿಂದೂಗಳು ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ' ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications