Birbhum Violence: ಬಿರ್ಭೂಮ್ ಹಿಂಸಾಚಾರ, ಸಿಬಿಐ ತನಿಖೆಗೆ
ಕೋಲ್ಕತ್ತಾ, ಮಾರ್ಚ್ 25; ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸಿಬಿಐ ತನಿಖೆ ನಡೆಯಲಿದೆ. ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್ ಆದೇಶದಂತೆ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಏಪ್ರಿಲ್ 7ರೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಮಾರ್ಚ್ 21ರಂದು ಸಂಜೆ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯ ಬಳಿಕ ಹಿಂಸಾಚಾರ ನಡೆದಿದ್ದು, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 8 ಜನರನ್ನು ಸಜೀವವಾಗಿ ದಹನ ಮಾಡಲಾಗಿತ್ತು.

ಪ್ರಸ್ತುತ ಹಿಂಸಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಘಟನೆ ಬಳಿಕ ನಿರ್ಲಕ್ಷ್ಯ, ಕರ್ತವ್ಯ ಲೋಪದ ಆಧಾರದ ಮೇಲೆ ಕೆಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಹಿಂಸಾಚಾರ ಪ್ರಕರಣದಲ್ಲಿ ಮೃತಪಟ್ಟವರನ್ನು ಸಜೀವವಾಗಿ ದಹನ ಮಾಡುವ ಮೊದಲು ಥಳಿಸಲಾಗಿದೆ ಎಂಬ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. ಲೋಕಸಭೆ ಕಲಾಪದಲ್ಲಿಯೂ ಶುಕ್ರವಾರ ಹತ್ಯಾಕಾಂಡದ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿತ್ತು.
8 ಜನರ ಸಜೀವ ದಹನ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಹಲವು ಈ ಕುರಿತು ಪ್ರತಿಕ್ರಿಯೆ ನೀಡಿದ್ದರು.
ಹತ್ಯಾಕಾಂಡಕ್ಕೆ ಕಾರಣರಾದವರು ಯಾವುದೇ ಪಕ್ಷದವರಾದರೂ ಕ್ಷಮಿಸುವುದಿಲ್ಲ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಹಿಂಸಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಕೋರ್ಟ್ ಶುಕ್ರವಾರ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ಆದೇಶ ನೀಡಿದೆ.
ಘಟನೆ ಏನು?; ಬಿರ್ಭೂಮ್‌ನ ಬರೋಸಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಟಿಎಂಸಿ ಪಕ್ಷದ ಮುಖಂಡ ಭಡು ಶೇಕ್ ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ ಬೈಕ್‌ನಲ್ಲಿ ಬಂದ ನಾಲ್ವರು ಕಚ್ಚಾ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಈ ಘಟನೆ ಬಳಿಕ ಆಕ್ರೋಶಗೊಂಡ ಭಡು ಶೇಕ್ ಬೆಂಬಲಿಗರು 12ಕ್ಕೂ ಅಧಿಕ ಮನೆಗಳಿಗೆ ಬೆಂಕಿ ಹಚ್ಚಿದರು. ಆಗ ನಡೆದ ಹಿಂಸಾಚಾರದಲ್ಲಿ 8 ಮಂದಿ ಸಜೀವವಾಗಿ ದಹನವಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 20 ಜನರನ್ನು ಪೊಲೀಸರು ಬಂಧಿಸಿದರು.
ಬಳಿಕ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಈ ಘಟನೆ ಕುರಿತು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಗೃಹ ಇಲಾಖೆಯಿಂದ ವರದಿಯನ್ನು ಸಹ ಕೇಳಿದೆ.












Click it and Unblock the Notifications