ಬಾಂಗ್ಲಾದೇಶ ಪ್ರವಾಸ ಪ್ರಶ್ನಿಸಿದ ಟಿಎಂಸಿಗೆ ಪ್ರಧಾನಿ ತಿರುಗೇಟು!
ಕೋಲ್ಕತ್ತಾ, ಏಪ್ರಿಲ್ 1: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಂಗಾಳ ಸಂಸ್ಕೃತಿಯನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಜಯನಗರ್ ಎಂಬಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಬಾಂಗ್ಲಾದೇಶ ಪ್ರವಾಸವು ನೀತಿ ಸಂಹಿತೆ ಉಲ್ಲಂಘನೆ ಎಂಬ ಟಿಎಂಸಿ ಆರೋಪಕ್ಕೆ ಅವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ 66 ವರ್ಷದ 'ಆಂಟಿ' ಎಂದ ಸುವೇಂದು ಅಧಿಕಾರಿ!
"ನಾನು ಬಾಂಗ್ಲಾದೇಶದಲ್ಲಿರುವ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಬಗ್ಗೆ ದೀದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಧಾರ್ಮಿಕ ನಂಬಿಕೆಗಳು ಕೇವಲ ಒಂದು ಕಾಲಕ್ಕಷ್ಟೇ ಸೀಮಿತವಾಗಿಲ್ಲ" ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
ನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿಗೆ ಸೋಲಿನ ಭೀತಿ:
ಪಶ್ಚಿಮ ಬಂಗಾಳದ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ವಿಶ್ವಾಸಾರ್ಹ ಸಹಾಯಕ ಹಾಗೂ ಈಗಿನ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ಎದುರು ಸೋಲಿನ ಭೀತಿ ಕಾಡುತ್ತಿದೆ. ದೀದಿ ಅವರು ತಮ್ಮ ಭವಾನಿಪುರ್ ಕ್ಷೇತ್ರವನ್ನು ಬಿಟ್ಟು ನಂದಿಗ್ರಾಮ್ ಕ್ಷೇತ್ರಕ್ಕೆ ಬಂದಿದ್ದು ತಪ್ಪಾಯಿತು ಎಂಬ ಅರಿವಾದಂತೆ ಕಾಣುತ್ತಿದೆ. ಆದ್ದರಿಂದಲೇ ಕಳೆದ ಮೂರು ದಿನಗಳಿಂದ ನಂದಿಗ್ರಾಮ್ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಎರಡನೇ ಹಂತದ ಚುನಾವಣೆ:
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 1ರಂದು ಎರಡನೇ ಹಂತದಲ್ಲಿ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ದಕ್ಷಿಣ ಪರಗಣ, ಬಂಕುರಾ, ಪಶ್ಚಿಮ ಮೇದಿನಿಪುರ್, ಪೂರ್ಬಾ ಮೇದಿನಿಪುರ್ ಜಿಲ್ಲೆಗಳಲ್ಲಿ ಮತದಾನ ನಡೆಸಲಾಗುತ್ತಿದೆ. ಉಳಿದಂತೆ ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.