ಭದ್ರತಾ ವೈಫಲ್ಯ: ಸಿಎಂ ಮಮತಾ ಬ್ಯಾನರ್ಜಿ ಭದ್ರತಾ ನಿರ್ದೇಶಕ ಅಮಾನತು
ಕೋಲ್ಕತ್ತಾ, ಮಾರ್ಚ್ 14: ಪಶ್ಚಿಮ ಬಂಗಾಳದ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರದ ವೇಳೆ ನಡೆದ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದಿರುವ ಚುನಾವಣಾ ಆಯೋಗವು ಸಿಎಂ ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ರನ್ನು ಅಮಾನತುಗೊಳಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ತಮ್ಮ ಮೇಲಿನ ಹಲ್ಲೆಗೆ ಬಿಜೆಪಿ ಕಾರಣ ಎಂದು ಆರೋಪಿಸಿದ್ದರು. ಸರ್ಕಾರ ನೀಡಿದ ಎರಡನೇ ವರದಿಯನ್ನು ಆಧರಿಸಿ ಚುನಾವಣಾ ಆಯೋಗವು ತನ್ನ ವರದಿ ಬಿಡುಗಡೆಗೊಳಿಸಿದೆ.
ನಂದಿಗ್ರಾಮ್ ಕ್ಷೇತ್ರದಲ್ಲಿ ನಡೆದ ಘಟನೆಯು ಒಂದು ಅಪಘಾತವೇ ವಿನಃ ಉದ್ದೇಶಪೂರ್ವಕ ದಾಳಿಯಲ್ಲ. ಸಿಎಂ ಮಮತಾ ಬ್ಯಾನರ್ಜಿ ಅವರ ಭದ್ರತಾ ಜವಾಬ್ದಾರಿ ಹೊತ್ತ ಅಧಿಕಾರಿಗಳ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂದು ಆಯೋಗ ವರದಿಯಲ್ಲಿ ಉಲ್ಲೇಖಿಸಿತ್ತು.

ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಪಟ್ಟಿ:
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರದ ಸಂದರ್ಭದಲ್ಲಿ ಭದ್ರತೆಗೆ ನಿಯೋಜನೆಯಾಗಿದ್ದ ಸಿಬ್ಬಂದಿ ಮತ್ತು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ಪಟ್ಟಿಯನ್ನು ಮುಂದಿನ ಮೂರು ದಿನಗಳಲ್ಲಿ ಆಯೋಗಕ್ಕೆ ನೀಡಬೇಕು. ಅದಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯದರ್ಶಿ ಮತ್ತು ಡಿಜಿಪಿ ಅವರು ತಂಡವೊಂದನ್ನು ರಚಿಸಬೇಕು ಎಂದು ಆಯೋಗವು ಸೂಚಿಸಿದೆ.
ವಿವಿಐಪಿಗೆ ಮೀಸಲಾದ ಬುಲೆಟ್ ಪ್ರೂಫ್ ಕಾರಿನಲ್ಲಿ ಸಿಎಂ ಭದ್ರತಾ ನಿರ್ದೇಶ ವಿವೇಕ್ ಸಹಾಯ್ ಕುಳಿತಿದ್ದರೆ, ಮುಖ್ಯಮಂತ್ರಿಗಳೇ ಸಾಮಾನ್ಯ ವಾಹನವನ್ನು ಬಳಸುತ್ತಿದ್ದರು. "ಮುಖ್ಯಮಂತ್ರಿ ನಿಗದಿತ ಭದ್ರತಾ ಮಾನದಂಡ ಮತ್ತು ಶಿಷ್ಟಾಚಾರವನ್ನು ಉಲ್ಲಂಘಿಸಿರುವುದೇ ದುರಂತಕ್ಕೆ ಕಾರಣ ಎಂದು ಚುನಾವಣಾ ಆಯೋಗದ ಸಮೀಕ್ಷಾ ಸಂಸ್ಥೆಯು ಹೇಳಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪಂಜಾಬ್ ಗುಪ್ತಚರ ಇಲಾಖೆಯ ಮಾಜಿ ಡಿಜಿಪಿ ಅನಿಲ್ ಕುಮಾರ್ ಶರ್ಮಾ ಅವರನ್ನು ವಿಶೇಷ ಪೊಲೀಸ್ ವೀಕ್ಷಕರಾಗಿ ಚುನಾವಣಾ ಆಯೋಗವು ನೇಮಕ ಮಾಡಲಾಗಿದೆ. ವಿವೇಕ್ ಡ್ಯೂಬ್ ಜೊತೆಗೆ ಎಕೆ ಶರ್ಮಾ ಎರಡನೇ ವಿಶೇಷ ಪೊಲೀಸ್ ವೀಕ್ಷಕರಾಗಲಿದ್ದಾರೆ.












Click it and Unblock the Notifications