ಸಂಧಾನ ಕಸರತ್ತು ವಿಫಲ: ಸಿಎಂ ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನಡೆ
ಕೋಲ್ಕತ್ತಾ, ಡಿ 8: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಈಗಾಗಲೇ ಕಸರತ್ತನ್ನು ಆರಂಭಿಸಿದೆ. ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಈಗಾಗಲೇ ಒಂದು ರೌಂಡ್, ದೀದಿ ನಾಡಿಗೆ ಹೋಗಿ ಬಂದಿದ್ದಾರೆ.
ಜನವರಿಯಿಂದ ಅಸೆಂಬ್ಲಿ ಚುನಾವಣೆ ಮುಗಿಯುವವರೆಗೆ ತಿಂಗಳಿಗೆ ಎರಡು ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲು ಶಾ ಮತ್ತು ನಡ್ಡಾ ನಿರ್ಧರಿಸಿದ್ದಾರೆ. ಇನ್ನು, ಯುವಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ, ದೀದಿ ವಿರುದ್ದದ ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನಲ್ಲಿ ಬಿರುಕು ಮೂಡಿರುವುದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗುತ್ತಿದೆ. ಪಕ್ಷದ ಹಲವು ಹಿರಿಯ ಮುಖಂಡರು ಮತ್ತು ಸಂಸದರು ಪಕ್ಷಕ್ಕೆ ಗುಡ್ ಬೈ ಹೇಳುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಟಿಎಂಸಿ ಮಾಜಿ ಸಚಿವ ಮತ್ತು ಪ್ರಬಾವೀ ಮುಖಂಡ ಸುವೇಂದು ಅಧಿಕಾರಿ ಪಕ್ಷ ತೊರೆಯುವ ಬಗೆಗಿನ ಗೊಂದಲಗಳು ಹಾಗೇ ಮುಂದುವರಿದಿದೆ. ಇವೆಲ್ಲದರ ನಡುವೆ, ರಾಜ್ಯದ ಮಿಡ್ನಾಪುರದಲ್ಲಿ ನಡೆದ ಟಿಎಂಸಿ ರ‍್ಯಾಲಿಯಲ್ಲಿ ಸುವೇಂದು ಅಧಿಕಾರಿ ಗೈರಾಗುವ ಮೂಲಕ, ಮಮತಾ ವಿರುದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಬಂಡಾಯ
ಪಕ್ಷದ ಆಯಕಟ್ಟಿನ ಮುಖಂಡರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಬಂಡಾಯ ಎದ್ದಿರುವ ಸುವೇಂದು ಅಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಪಕ್ಷಕ್ಕಾಗುವ ಹಾನಿಯನ್ನು ಅರಿತ ಮಮತಾ, ಕೂಡಲೇ ಸಂಧಾನ ನಡೆಸಿದ್ದರು. ಒಂದು ಹಂತಕ್ಕೆ ಸುವೇಂದು ತಣ್ಣಗಾದರು ಎಂದು ಹೇಳಲಾಗುತ್ತಿತ್ತು. ಆದರೆ, ಪಕ್ಷದ ಸಭೆಯಲ್ಲಿ ಗೈರಾಗುವ ಮೂಲಕ, ಇವರ ಜೊತೆಗೆ ನಡೆಸಿದ ಸಂಧಾನ ವಿಫಲವಾದಂತೆ ಕಾಣಿಸುತ್ತಿದೆ. (ಚಿತ್ರ:ಪಿಟಿಐ)

ಟಿಎಂಸಿ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ
"ಟಿಎಂಸಿ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ"ಎಂದು ಟೀಕಿಸಿದ್ದ ಸುವೇಂದು ಅಧಿಕಾರಿ ತಮ್ಮ ಕುಟುಂಬದ ಸಮೇತ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ಬಲವಾದ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ, ಮಿಡ್ನಾಪುರ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ದ ಕಿಡಿಕಾರಿದ್ದರು. (ಚಿತ್ರದಲ್ಲಿ ಸುವೇಂದು ಅಧಿಕಾರಿ)

ಬಿಜೆಪಿ ನಮ್ಮ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ
"ಪಶ್ಚಿಮ ಮಿಡ್ನಾಪುರದ ವ್ಯಾಪ್ತಿಯ ಎಲ್ಲಾ ಶಾಸಕರು (ಒಬ್ಬರನ್ನು ಹೊರತು ಪಡಿಸಿ) ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ನಿಮಗೆಲ್ಲರಿಗೂ ಒಂದು ಮಾತು ಹೇಳಲು ಬಯಸುತ್ತೇನೆ, ನಮ್ಮ ಪಕ್ಷ ನಿಯತ್ತಿನ ಪಾರ್ಟಿ. ನಾವು ಬಿಜೆಪಿಯವರ ರೀತಿಯಲ್ಲಿ ಅಲ್ಲ. ಬಿಜೆಪಿ ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎನ್ನುವ ಭ್ರಮೆಯಲ್ಲಿದೆ. ಬಿಜೆಪಿ ನಮ್ಮ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ"ಎಂದು ಮಮತಾ ಬ್ಯಾನರ್ಜಿ, ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಚಿತ್ರ:ಪಿಟಿಐ)

ಸುವೇಂದು ಅಧಿಕಾರಿಯವರ ತಂದೆ ಮತ್ತಿಬ್ಬರು ಸಹೋದರರು ಟಿಎಂಸಿ ಶಾಸಕರು
ಸುವೇಂದು ಅಧಿಕಾರಿಯವರ ತಂದೆ ಮತ್ತಿಬ್ಬರು ಸಹೋದರರು ಟಿಎಂಸಿ ಶಾಸಕರು. ಅದರಲ್ಲಿ ಒಬ್ಬ ಸಹೋದರ ಮಿಡ್ನಾಪುರದ ಎಂಎಲ್ಎ ಆಗಿದ್ದಾರೆ. ಆದರೆ, ಇವರ್ಯಾರೂ ಮಮತಾ ಸಭೆಯಲ್ಲಿ ಭಾಗವಹಿಸದೇ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಸುವೇಂದು ಅಧಿಕಾರಿ ಪಕ್ಷ ಬಿಡುವ ನಿರ್ಧಾರವನ್ನೇ ಅಂತಿಮಗೊಳಿಸಿದರೆ, ಟಿಎಂಸಿಗೆ ಭಾರೀ ಹೊಡೆತ ಬೀಳಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications