ಮರಣೋತ್ತರ ಪರೀಕ್ಷೆ: ಗಾಯಕ ಕೆಕೆ ಹೃದಯದಲ್ಲಿ ಕೊಬ್ಬಿನ ಅಂಶ ಪತ್ತೆ
ಕೋಲ್ಕತ್ತಾ ಜೂನ್ 3: ಖ್ಯಾತ ಗಾಯಕ ಕೆಕೆ ಎಂದೇ ಪ್ರಸಿದ್ಧವಾಗಿರುವ ಕೃಷ್ಣಕುಮಾರ್ ಕುನ್ನತ್ ಮರಣೋತ್ತರ ಪರೀಕ್ಷೆ ಮತ್ತು ಒಳ ಅಂಗಗಳ ಪರೀಕ್ಷೆಯ ವರದಿಯನ್ನು ಹಿಸ್ಪೋಪಾಥೋಲಾಜಿಕಲ್ ಪರೀಕ್ಷೆಗೆ ಕಳುಹಿಸಲಾಗಿದೆ.
Recommended Video
ಕೆಕೆ ಹೃದಯದ ಸುತ್ತಲೂ ಕೊಬ್ಬಿನ ಪದರವನ್ನು ಹೊಂದಿದ್ದು, ಅದು ಬಿಳಿ ಬಣ್ಣಕ್ಕೆ ತಿರುಗಿದೆ ಮತ್ತು ಹೃದಯವನ್ನು ತೆರೆದಾಗ ಅದು ಗಟ್ಟಿಯಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಹೀಗಾಗಿ ವರದಿಯನ್ನು ಹಿಸ್ಪೋಪಾಥೋಲಾಜಿಕಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಸ್ಪೋಪಾಥೋಲಾಜಿ ಎನ್ನುವುದು ಅಂಗಾಂಶಗಳ ಅಧ್ಯಯನವಾಗಿದ್ದು, ಅದು ಬ್ಲಾಕೇಜ್ ಸಮಸ್ಯೆಗಳಿದ್ದರೆ ಬಹಿರಂಪಡಿಸುತ್ತದೆ. "ಕಾಲ ಕಳೆದಂತೆ ಹೃದಯವು ಗಟ್ಟಿಯಾಗುತ್ತಾ ಹೋಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಮರಣೋತ್ತರ ಪರೀಕ್ಷೆ ಮತ್ತು ಒಳ ಅಂಗಗಳ ಪರೀಕ್ಷೆಯ ವರದಿಯನ್ನು ಹಿಸ್ಪೋಪಾಥೋಲಾಜಿಕಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಬ್ಲಾಕೇಜ್ ಸಮಸ್ಯೆಗಳಿದ್ದರೆ ಪತ್ತೆಯಾಗಲಿದೆ,'' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ವಿವಿಧ ಔಷಧಗಳು ಪತ್ತೆ
ಗ್ಯಾಸ್ಟ್ರಿಕ್ ಮತ್ತು ಯಕೃತ್ತಿಗೆ ಸಂಬಂಧಿಸಿದ 10 ವಿವಿಧ ಔಷಧಗಳು ಹಾಗೂ ಬಹು ಅಂಟಾಸಿಡ್ ಗಳು ಮತ್ತು ವಿಟಮಿನ್ ಸಿ ಕೆಕೆ ದೇಹದಲ್ಲಿ ಪತ್ತೆಯಾಗಿವೆ. ಇದು ಆಮ್ಲೀಯತೆ, ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುತ್ತದೆ, ಅವರ ದೇಹದಲ್ಲಿ ಪತ್ತೆಯಾದ ಔಷಧಗಳಲ್ಲಿ ಕೆಲವು ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳು ಸೇರಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಭುಜಗಳ ನೋವು ಎಂದು ಹೇಳಿದ್ದರು
"ಕೆಕೆ ಆಗಾಗ್ಗೆ ಅಂಟಾಸಿಡ್ ಮಾತ್ರೆಗಳನ್ನು ಸೇವಿಸುತ್ತಿದ್ದರು. ಮೇ 31ರಂದು ಅವರು ತಮ್ಮ ಮ್ಯಾನೇಜರ್ ಕರೆದು, ಏಕೋ ಸುಸ್ತಾಗುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಸಾಯುವ ಕೆಲವು ಗಂಟೆಗಳ ಮೊದಲು ತನ್ನ ಭುಜ ಮತ್ತು ತೋಳುಗಳು ನೋಯುತ್ತಿವೆ ಎಂದು ಅವರ ಹೆಂಡತಿಗೆ ತಿಳಿಸಿದ್ದರು,'' ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಸೆಲೆಬ್ರಿಟಿ ಮ್ಯಾನೇಜರ್ ವಿಚಾರಣೆ
ಗುರುವಾರ ಕೋಲ್ಕತ್ತಾದ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಕೋಲ್ಕತ್ತಾ ಮೂಲದ ಬ್ಲ್ಯಾಕ್ ಐಡ್ ಈವೆಂಟ್ ಹೌಸ್‌ನ ಸೆಲೆಬ್ರಿಟಿ ಮ್ಯಾನೇಜರ್ ಒಬ್ಬರ ವಿಚಾರಣೆ ನಡೆಸಿದ್ದಾರೆ. ಇವರು ಕೆಕೆ ಹಾಡಲು ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮ ನಡೆದ ನಜ್ರೂಲ್ ಮಂಜ್ ಸ್ಥಳದಿಂದ ಹೋಟೆಲ್‌ಗೆ ಕೆಕೆ ಅವರನ್ನು ಕರೆತರುವಾಗ ಕಾರಿನಲ್ಲಿ ಕೆಕೆ ಅವರ ಮ್ಯಾನೇಜರ್ ಹಿತೇಶ್ ಭಟ್ ಕೂಡ ಜತೆಗಿದ್ದರು. ಪೊಲೀಸರು ಕೆಕೆ ಅವರ ಕಾರಿನ ಚಾಲಕ ಎತ್ವಾರಿ ಯಾದವ್ ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಕೆಕೆ ಅವರು ಹೋಟೆಲ್‌ಗೆ ಹಿಂತಿರುವ ಸಮಯದಲ್ಲಿ ಅಸ್ವಸ್ಥರಾಗಿದ್ದರು ಎಂದು ಆತ ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಕಾನ್ಸರ್ಟ್‌ನ ವೇದಿಕೆಯಲ್ಲಿ ಕುಸಿದ ಕೆಕೆ
ಜೂನ್ 1 ರಂದು ಗಾಯಕ ಕೆಕೆ ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನೀಡುವ ವೇಳೆ ಕುಸಿದು ಬಿದ್ದಿದ್ದು, ಮೃತಪಟ್ಟಿದ್ದರು. ಕೆಕೆ ಎಂದೇ ಚಿರಪರಿಚತಾರಿದ್ದ ಕೃಷ್ಣಕುನಾರ್ ಕುನ್ನತ್ (53) ಕೋಲ್ಕತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನೀಡುವಾಗಲೇ ವೇದಿಕೆ ಮೇಲೆಯೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೆಕೆ ಸಾವನ್ನಪ್ಪಿದ್ದರು.

ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು
ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30 ರಂದು ಕೋಲ್ಕತಾ ನಗರಕ್ಕೆ ಆಗಮಿಸಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಕೆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ವೇದಿಕೆಯಲ್ಲಿ ಕುಸಿದ ಕೆಕೆಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಯಿತು. ನಂತರ ಅವರು ತಕ್ಷಣ ತಾವು ತಂಗಿದ್ದ ಹೋಟೆಲ್‌ಗೆ ವಾಪಸಾಗಿದ್ದಾರೆ. ಹೋಟೆಲ್‌ನಲ್ಲಿ ಕೆಕೆ ತೀವ್ರ ಅಸ್ವಸ್ಥರಾಗಿದ್ದು ಅಲ್ಲಿಂದ ಕೋಲ್ಕತ್ತಾದ ಸಿಎಂಆರ್‌ಐ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ಕೆಕೆ ಮೃತಪಟ್ಟಿದ್ದರು.












Click it and Unblock the Notifications