ಕೊರೊನಾ: ಜೈಲಿನಲ್ಲಿ ಕೈದಿಗಳ ದಾಂಧಲೆ, ಪೊಲೀಸ್ ಫೈರಿಂಗ್ ನಲ್ಲಿ ಹಲವರ ಸಾವು?
ಕೋಲ್ಕತ್ತಾ, ಮಾರ್ಚ್ 22: ಅನಿರೀಕ್ಷಿತ ವಿದ್ಯಮಾನವೊಂದರಲ್ಲಿ ನಗರದ ಉತ್ತರದಲ್ಲಿರುವ ಢಂಢಂ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಏಕಾಏಕಿ, ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರಿಂದ, ಪೊಲೀಸ್ ಫೈರಿಂಗ್ ನಿಂದ ಸಾವುನೋವು ಸಂಭವಿಸಿದೆ.
ಶನಿವಾರ (ಮಾ 21) ಮಧ್ಯಾಹ್ನದ ನಂತರ ಕೈದಿಗಳು, ಜೈಲು ಅಧಿಕಾರಿಗಳ ಮೇಲೆ ಇಟ್ಟಿಗೆಯಿಂದ ದಾಳಿ ನಡೆಸಿ, ಸಿಕ್ಕಸಿಕ್ಕ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಬೆಂಕಿಯಿಡಲು ಆರಂಭಿಸಿದರು. ಪರಿಸ್ಥಿತಿ ತಹಬಂದಿಗೆ ತರಲು ಹೆಚ್ಚುವರಿ ಪೊಲೀಸರನ್ನು ಕರೆಸಿ, ಆಗಲೂ ನಿಯಂತ್ರಣಕ್ಕೆ ಬರದೇ ಇದ್ದಾಗ, ಫೈರಿಂಗ್ ನಡೆಸಿದ್ದಾರೆಂದು ವರದಿಯಾಗಿದೆ.
ಸಾವುನೋವಿನ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳದಿದ್ದರೂ, ಐದು ಕೈದಿಗಳು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಪೊಲೀಸರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಕೈದಿಗಳ ಕುಟುಂಬದವರು ಜೈಲಿಗೆ ಬರುವುದನ್ನು ನಿಷೇಧಿಸಲಾಗಿತ್ತು. ಕೆಲವರು ಪೆರೋಲ್ ಮೇಲೆ ಬಿಡುಗಡೆಗೊಳಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು.
ಕೆಲವು ಕೈದಿಗಳ ಬೇಲ್ ಅರ್ಜಿಯ ವಿಚಾರಣೆ ಶನಿವಾರ ನಡೆಯಬೇಕಾಗಿತ್ತು. ಆದರೆ, ಕೊರೊನಾದಿಂದಾಗಿ ಕೋರ್ಟ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಲಾಗಿತ್ತು.
ಈ ಕಾರಣಕ್ಕಾಗಿ ಮತ್ತು ಪೆರೋಲ್ ನಿರಾಕರಿಸಿದ್ದಕ್ಕಾಗಿ, ಕೈದಿಗಳು ಹಿಂಸಾಚಾರಕ್ಕೆ ಇಳಿದರು ಎಂದು ಪಿಟಿಐ ವರದಿ ಮಾಡಿದೆ. ಘಟನೆಯನ್ನು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ಹೇಳಿದ್ದು, ಯಾರಾದರೂ ಮೃತ ಪಟ್ಟಿದ್ದಾರಾ ಎನ್ನುವುದರ ಬಗ್ಗೆ ಸ್ಪಷ್ಟನೆಯನ್ನು ನೀಡಲಿಲ್ಲ. (ಚಿತ್ರ:ಪಿಟಿಐ)












Click it and Unblock the Notifications