ಬಂಗಾಳದಲ್ಲಿ 36,000 ಶಿಕ್ಷಕರ ನೇಮಕಾತಿ ರದ್ದು: ನೂತನ ನೇಮಕಾತಿ ಪ್ರಕ್ರಿಯೆಯಲ್ಲಿ ವಿಡಿಯೋ ಕಣ್ಗಾವಲಿಗೆ ಸೂಚನೆ
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ ಕಲ್ಕತ್ತಾ ಹೈಕೋರ್ಟ್ 36,000 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ನೇಮಕಾತಿಗೆ ಕ್ರಮಗಳನ್ನು ಅನುಸರಿಸದ ಕಾರಣ ಕಲ್ಕತ್ತಾ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಈ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾದ್ಯಾಯ್ ಪಶ್ಚಿಮ ಬಂಗಾಳದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಭಷ್ಟಾಚಾರದ ಪ್ರಮಾಣ ಮಿತಿಯನ್ನು ಮೀರಿದೆ ಎಂದು ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.
" 2016ರಲ್ಲಿ ಮಂಡಳಿ 36,000ದಷ್ಟು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಅಗತ್ಯ ತರಬೇತಿ ಹೊಂದಿರಲಿಲ್ಲ. ಈ ಎಲ್ಲಾ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ್ ನಿರ್ದೇಶನ ನೀಡಿದ್ದಾರೆ. ಈ ತೀರ್ಪು ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಪಕ್ಷಕ್ಕೆ ಬಹುದೊಡ್ಡ ಮುಖಭಂಗ ಎಂದೇ ಪರಿಗಣಿಸಲಾಗುತ್ತಿದೆ.

ರಾತ್ರಿ 11 ಗಂಟೆಯ ನಂತರ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಈ ತೀರ್ಪಿನ ಆದೇಶವನ್ನು ಪ್ರಕಟಿಸಲಾಗಿದೆ. 17ಪುಟಗಳ ಈ ಆದೇಶದಲ್ಲಿ ನ್ಯಾಯಮೂರ್ತಿ ಗಂಗೋಪಾಧಯ್ ಅಭ್ಯರ್ಥಿಗಳು ಮತ್ತು ಸಂದರ್ಶಕರ ಸಾಕ್ಷ್ಯದಿಂದ ಯಾವುದೇ ಸಾಮರ್ಥ್ಯ ಪರೀಕ್ಷೆ ನಡೆದಿಲ್ಲ ಎಂಬ ಆರೋಪವು ತನ್ನ ಮುಂದೆ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯು ನಡೆಸಿದ 2016 ರ ನೇಮಕಾತಿ ಪ್ರಕ್ರಿಯೆಯಲ್ಲಿನ ಆಯ್ಕೆ ಪ್ರಕ್ರಿಯೆಯಲ್ಲಿನ ಸಂಪೂರ್ಣ ಅಕ್ರಮದಿಂದ ಕೂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಡಳಿ ಮತ್ತು ಅದರ ಮಾಜಿ ಅಧ್ಯಕ್ಷ ಮಾಣಿಕ್ ಭಟ್ಟಾಚಾರ್ಯ ಸೇರಿದಂತೆ ಕೆಲ ಅಧಿಕಾರಿಗಳು ಈ ನೇಮಕಾತಿಯಲ್ಲಿ ಭಾರೀ ಅಕ್ರಮ ಹಣದ ವ್ಯವಹಾರ ನಡೆದಿರುವ ಆರೋಪದಲ್ಲಿ ಬಂಧಿತರಾಗಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಹಣದ ಅವ್ಯವಹಾರ ನಡೆದ ಆರೋಪದಲ್ಲಿ ಈ ಬಂಧನ ನಡೆದಿದೆ. ಇದೀಗ ಕೋರ್ಟ್ "ಮಂಡಳಿ ಈ ಪ್ರಕ್ರಿಯೆಯನ್ನು ಸ್ಥಳೀಯ ಕ್ಲಬ್‌ನಂತೆ ರೀತಿಯಲ್ಲಿ ಕಾರ್ಯನಿರ್ವಹಿಸಿದೆ" ಎಂದು ಅಭಿಪ್ರಾಯಪಟ್ಟಿದೆ.
ಇನ್ನು ಇದೇ ಸಂದರ್ಭದಲ್ಲಿ ನೂತನ ನೇಮಕಾತಿಯ ವಿಚಾರವಾಗಿಯೂ ಕೋರ್ಟ್ ತನ್ನ ನಿರ್ದೇಶನ ನೀಡಿದೆ. ಎಲ್ಲಾ ಪರೀಕ್ಷಾರ್ಥಿಗಳ ಸಂದರ್ಶನ ಮತ್ತು ಸಾಮರ್ಥ್ಯ ಪರೀಕ್ಷೆ ಎರಡನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಮತ್ತು ಸಂಪೂರ್ಣ ಸಂದರ್ಶನ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ವೀಡಿಯೊಗ್ರಾಫ್ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಇನ್ನು 2016ರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಸರಿಸಿದ ನೀತಿ ಹಾಗೂ ಕಾನೂನು ಪ್ರಕಾರದಂತೆಯೇ ನೂತನ ಪ್ರಕ್ರಿಯೆಯನ್ನು ಕೂಡ ನಡೆಸುವಂತೆ ನ್ಯಾಯಮೂರ್ತಿ ಗಂಗೋಪಾಧ್ಯಾಯ್ ನಿರ್ದೇಶನ ನೀಡಿದ್ದಾರೆ. ಇನ್ನು 2016ರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಡಳಿಯ ಶಿಫಾರಸಿನ ವಿರುದ್ಧ ಪ್ರಾಥಮಿಕ ಶಾಲೆಗಳಲ್ಲಿ ನೇಮಕಗೊಂಡ ಪ್ರಾಥಮಿಕ ಶಿಕ್ಷಕರಿಗೆ ತೀರ್ಪು ನೀಡಿದ ದಿನದಿಂದ ನಾಲ್ಕು ತಿಂಗಳ ಅವಧಿಗೆ ಪ್ರಾಥಮಿಕ ಅರೆ ಶಿಕ್ಷಕರಿಗೆ ಸಮಾನವಾದ ಸಂಭಾವನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ನಿರ್ದೇಶಿಸಿದ್ದಾರೆ.












Click it and Unblock the Notifications