ಐತಿಹಾಸಿಕ ಪಂದ್ಯ ವೀಕ್ಷಿಸಲು ಬಾಂಗ್ಲಾ ಪ್ರಧಾನಿ ಭಾರತಕ್ಕೆ ಆಗಮನ
ಕೋಲ್ಕತ್ತಾ, ನವೆಂಬರ್ 22: ಭಾರತ ಹಾಗೂ ಬಾಂಗ್ಲಾ ನಡುವಿನ ಐತಿಹಾಸಿಕ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಹಸೀನಾರನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಶುಕ್ರವಾರ ಬೆಳಿಗ್ಗೆ ಕೋಲ್ಕತ್ತಾಗೆ ಆಗಮಿಸಿದ ಹಸೀನಾ, ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಉದ್ಘಾಟಿಸಿದರು.
ಪಂದ್ಯ ವೀಕ್ಷಣೆಯ ಹೊರತಾಗಿ ಬಾಂಗ್ಲಾ ಪ್ರಧಾನಿ ಹಸೀನಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಲಿದ್ದಾರೆ. ಉಭಯ ನಾಯಕರು ಸಂಕ್ಷಿಪ್ತ ಸಭೆ ನಡೆಸಲಿದ್ದಾರೆ. ತೀಸ್ತಾ ನದಿ ನೀರನ್ನು ಹಂಚಿಕೊಳ್ಳುವ ಒಪ್ಪಂದಕ್ಕಾಗಿ, ಬಾಂಗ್ಲಾದ ದೀರ್ಘಕಾಲದ ಬೇಡಿಕೆಯನ್ನು ಚರ್ಚಿಸಲು ಈ ಸಭೆಯು ಪ್ರಾಮುಖ್ಯತೆ ಪಡೆದಿದೆ. ಬರಗಾಲದ ಸಮಯದಲ್ಲಿ ಪಶ್ಚಿಮ ಬಂಗಾಳದ ಮೇಲೆ ಪರಿಣಾಮ ಬೀರಬಹುದು ಎಂದು ದೀದಿ ಇದನ್ನು ವಿರೋಧಿಸಿದ್ದರು.
ಭಾರತ vs ಬಾಂಗ್ಲಾ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಮೊದಲೇ ಬಾಂಗ್ಲಾದೇಶದ ಪ್ರಧಾನಿಯನ್ನು, ಭಾರತದಲ್ಲಿ ನಡೆಯುವ ಐತಿಹಾಸಿಕ ಪಿಂಕ್ ಬಾಲ್ ನ ಹಗಲು-ರಾತ್ರಿ ಟೆಸ್ಟ್ ಪಂದ್ಯ ವೀಕ್ಷಿಸಲು ಆಹ್ವಾನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡಾ ಹಸೀನಾ ಅವರನ್ನು ಪಂದ್ಯ ವೀಕ್ಷಣೆಗೆ ಬರಲು ಮನವಿ ಮಾಡಿಕೊಂಡಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಐತಿಹಾಸಿಕ ಪಂದ್ಯ ವೀಕ್ಷಸಲು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಪಾಲ್ಗೊಂಡಿದ್ದರು. ಐಸಿಸಿಯು ಪಿಂಕ್ ಬಾಲ್ ಸ್ವರೂಪಕ್ಕೆ ಅನುಮೋದನೆ ನೀಡಿ 7 ವರ್ಷಗಳ ನಂತರ ಭಾರತ ಮೊದಲ ಬಾರಿಗೆ ಆಡುತ್ತಿದೆ. ಟಾಸ್ ಗೆ ಮುನ್ನ ಸೇನೆಯ ಪ್ಯಾರಾಟ್ರೂಪರ್ಸ್ಗಳು ಈಡನ್ ಗಾರ್ಡನ್ ಮೇಲೆ ಹಾರಿ, ಪಿಂಕ್ ಬಾಲ್ ನ್ನು ಉಭಯ ನಾಯಕರಿಗೆ ನೀಡಿದರು.
ನಂತರ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಡನ್ ಬೆಲ್ ಬಾರಿಸುವುದರ ಮೂಲಕ ಪಂದ್ಯಕ್ಕೆ ಚಾಲನೆದ ನೀಡಿದರು. ಸಂಜೆ ವೇಳೆಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಪಂದ್ಯ ವೀಕ್ಷಣೆಗೆ ಬರುವ ಸಾಧ್ಯತೆ ಇದೆ.












Click it and Unblock the Notifications