ಅಕ್ರಮ ಗಡಿ ಪ್ರವೇಶ: ಭಾರತೀಯರು, ಬಾಂಗ್ಲಾದೇಶೀಯರು ಸೇರಿ 17 ಮಂದಿ ಬಂಧನ
ಕೊಲ್ಕತ್ತಾ, ಅಕ್ಟೋಬರ್ 31: ಅಕ್ರಮವಾಗಿ ಗಡಿಯನ್ನು ದಾಟಲು ಯತ್ನಿಸುತ್ತಿದ್ದ ಒಟ್ಟು 17 ಮಂದಿಯನ್ನು ಗಡಿಭದ್ರತಾ ಪಡೆ ಯೋಧರು ಬಂಧಿಸಿದ್ದಾರೆ.
ಸಂಬಂಧಿಕರನ್ನು ಭೇಟಿಯಾಗಲು ಬಾಂಗ್ಲಾದೇಶಕ್ಕೆ ಹೊರಟಿದ್ದ ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಲು ಅಕ್ರಮವಾಗಿ ಭಾರತ-ಬಾಂಗ್ಲಾ ಗಡಿ ದಾಟುತ್ತಿದ್ದ 17 ಮಂದಿ ಬಾಂಗ್ಲಾದೇಶಿಯರು ಮತ್ತು ಭಾರತೀಯರನ್ನು ಬಂಧಿಸಲಾಗಿದೆ.
ಬಂಧಿತ ಭಾರತೀಯರು ಪಶ್ಚಿಮ ಬಂಗಾಳದ ಬೆನಪೋಲೆ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ದಾಟಿ ಬಾಂಗ್ಲಾದೇಶದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಿ ವಾಪಸ್ ಭಾರತಕ್ಕೆ ಹಿಂದಿರುಗುತ್ತಿದ್ದೆವು ಎಂದು ಹೇಳಿದ್ದರೆ, ಬಾಂಗ್ಲಾದೇಶಿಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಬಂಧಿತ 17 ಮಂದಿಯನ್ನು ಬಿಎಸ್ಎಫ್ ಯೋಧರು ಹನ್ಸಖಾಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತರಲ್ಲಿ ಐವರು ಬಾಂಗ್ಲಾದೇಶಿಯರು ಮತ್ತು 12 ಮಂದಿ ಭಾರತೀಯರು ಇದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾ ಗಡಿಯ ರಾಮನಗರ ಔಟ್‌ಪೋಸ್ಟ್ ಮೂಲಕ ಗಡಿ ದಾಟುತ್ತಿದ್ದ ಈ ಹದಿನೇಳು ಮಂದಿಯನ್ನು ಬಿಎಸ್ಎಫ್ ಯೋಧರು ಬಂಧಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತೊಂದು ಘಟನೆ ನಡೆದಿದ್ದು, ಅದೇ ದಿನ ಒಬ್ಬ ಭಾರತೀಯನನ್ನು ಬಿಎಸ್ಎಫ್ ತಂಡದವರು ಖಾಸ್ಮಾಹಲ್ ಔಟ್ ಪೋಸ್ಟ್‌ನಲ್ಲಿ ವಶಕ್ಕೆ ಪಡೆದು, ಅವರಿಂದ 10 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲಾಗಿತ್ತು ಎಂದು ಹೇಳಲಾಗಿದೆ.












Click it and Unblock the Notifications