ವಿಸ್ಟ್ರಾನ್ ಗಲಾಟೆ; ಎಸ್‌ಎಫ್‌ಐ ಸಂಘಟನೆ ಅಧ್ಯಕ್ಷ ಬಿಡುಗಡೆ
ಕೋಲಾರ, ಡಿಸೆಂಬರ್ 18: ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಐ ಸಂಘಟನೆ ಕೋಲಾರ ತಾಲೂಕು ಅಧ್ಯಕ್ಷ ಶ್ರೀಕಾಂತ್ ಬಂಧಿಸಲಾಗಿತ್ತು. ಪೊಲೀಸರು ವಿಚಾರಣೆ ಪೂರ್ಣಗೊಳಿಸಿ ಅವರನ್ನು ಬಿಡುಗಡೆ ಮಾಡಿದ್ದಾರೆ.
Recommended Video
ಗುರುವಾರ ರಾತ್ರಿ ಎಸ್‌ಎಫ್‌ಐ ಸಂಘಟನೆ ಕೋಲಾರ ತಾಲೂಕು ಅಧ್ಯಕ್ಷ ಶ್ರೀಕಾಂತ್ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸಂಸದ ಮುನಿಸ್ವಾಮಿ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶ್ರೀಕಾಂತ್ ವಶಕ್ಕೆ ಪಡದು ಪೊಲೀಸರು ವಿಚಾರಣೆ ನಡೆಸಿದ್ದರು.
ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಎಸ್‌ಎಫ್‌ಐ ಸಂಘಟನೆ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಆದ್ದರಿಂದ, ಗುರುವಾರ ಬೆಳಗ್ಗೆ ವೇಮಗಲ್ ಪೊಲೀಸರು ಶ್ರೀಕಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಶ್ರೀಕಾಂತ್ ಬಿಡುಗಡೆ ಮಾಡುವಂತೆ ಹಲವು ಕಾರ್ಮಿಕ ಸಂಘಟನೆ ಮುಖಂಡರು ಪೊಲೀಸರನ್ನು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಪೊಲೀಸರು ಶ್ರೀಕಾಂತ್ ಬಿಡುಗಡೆ ಮಾಡಿದ್ದಾರೆ. ಗಲಭೆ ಪ್ರಕರಣದ ತನಿಖೆಯನ್ನು ವೇಮಗಲ್ ಪೊಲೀಸರು ಮುಂದುವರೆಸಿದ್ದಾರೆ.
ಕಳೆದ ಶನಿವಾರ ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರು ಗಲಾಟೆ ಮಾಡಿದ್ದರು. ಕಂಪನಿಯ ಕಾರುಗಳಿಗೆ ಬೆಂಕಿ ಹಚ್ಚಿದ್ದರು, ಪಿಠೋಪಕರಣ ಧ್ವಂಸ ಮಾಡಿದ್ದರು. ಐಪೋನ್‌ಗಳನ್ನು ಕಳ್ಳತನ ಮಾಡಿದ್ದಾರೆ ಎಂಬ ಆರೋಪವೂ ಇದೆ.
ವೇತನದ ವಿಚಾರದಲ್ಲಿ ಕಾರ್ಮಿಕರು ದಾಂಧಲೆ ನಡೆಸಿದ್ದರಿಂದ ಸುಮಾರು 400 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications