ಮಾಂಗಲ್ಯದ ವಿಚಾರಕ್ಕೆ ಜಗಳ; ಆರೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ನವದಂಪತಿ
ಕೋಲಾರ, ಜನವರಿ 13: ಆರು ತಿಂಗಳ ಹಿಂದೆ ಮದುವೆ ಮಾಡಿಕೊಡುವ ವೇಳೆ ನೀಡಿದ್ದ ಭರವಸೆಯಂತೆ ಚಿನ್ನದ ಮಾಂಗಲ್ಯ ಸರ ಮಾಡಿಕೊಟ್ಟಿಲ್ಲ ಎಂಬ ವಿಚಾರದಲ್ಲಿ ನವದಂಪತಿ ಮಧ್ಯೆ ವಾಗ್ವಾದ ನಡೆದು ಅದು ಆತ್ಮಹತ್ಯೆಯಲ್ಲಿ ಕೊನೆಯಾದ ಘಟನೆ ಕೋಲಾರ ತಾಲೂಕಿನ ಹೋಳೂರು ಸಮೀಪದ ಕಮ್ಮಸಂದ್ರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಮೋಹನ್ (31) ಮತ್ತು ತಾಲೂಕಿನ ತಂಬಿಹಳ್ಳಿಯ ಪದ್ಮಾ (25) ಅವರ ವಿವಾಹ 6 ತಿಂಗಳ ಹಿಂದೆ ನಡೆದಿತ್ತು. ಮದುವೆ ಸಂದರ್ಭದಲ್ಲಿ ಮಾಂಗಲ್ಯ ಸರ ನೀಡುವುದಾಗಿ ಒಪ್ಪಿಕೊಂಡಿದ್ದ ಪದ್ಮಾ ತವರು ಮನೆಯವರು 6 ತಿಂಗಳಾದರೂ ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಮೋಹನ್-ಪದ್ಮಾ ನಡುವೆ ಆಗಾಗ ವಾದ ವಿವಾದ ನಡೆಯುತ್ತಿತ್ತು. ಶನಿವಾರವೂ ಇದೇ ವಿಷಯಕ್ಕೆ ಜಗಳ ತಾರಕಕ್ಕೇರಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದ ಗಂಡ ಹೆಂಡತಿ ಇಬ್ಬರು ನೇಣಿಗೆ ಶರಣಾಗಿದ್ದಾರೆ.

ಬೆಂಗಳೂರಿನ ಮಗಳ ಮನೆಗೆ ಹೋಗಿದ್ದ ಮೋಹನ್ ತಂದೆ-ತಾಯಿ ರಾತ್ರಿ ಮನೆಗೆ ಬಂದಾಗ ಮಗ ಸೊಸೆ ಸಾವನ್ನಪ್ಪಿರುವ ಅಂಶ ಬೆಳಕಿಗೆ ಬಂದಿದೆ. ಮೊದಲು ಪತ್ನಿ ಪದ್ಮಾಳ ಕುತ್ತಿಗೆ ಹಿಸುಕಿ ಸಾಯಿಸಿ ಬಳಿಕ ಮೋಹನ್ ಸಹ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮೃತ ಮೋಹನ್ ರ ತಂದೆ ಕೃಷ್ಣಪ್ಪ ಅವರ ದೂರಿನ ಮೇಲೆ ಕೋಲಾರ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದಾರೆ. ತಹಶೀಲ್ದಾರ್ ಶೋಭಿತಾ ಸ್ಥಳ ಮಹಜರು ನಡೆಸಿದ್ದಾರೆ.











Click it and Unblock the Notifications