ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ
ಕೋಲಾರ, ಅಕ್ಟೋಬರ್ 28: ರಾಜ್ಯದ ಯಾವುದೇ ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಒಂದು ವರ್ಷದೊಳಗೆ ಸರಕಾರಿ ಜಾಗದ ಹಕ್ಕುಪತ್ರವನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಕೆಜಿಎಫ್ ತಾಲೂಕಿನ ನೂತನ ಆಡಳಿತ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, "94ಸಿ, 94 ಸಿಸಿ ಅಡಿಯಲ್ಲಿ ಬೆಂಗಳೂರಿನಲ್ಲಿ10 ಸಾವಿರ ಬಡವರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗುವುದು. ಬಗರ್ ಹುಕಂ ಅಡಿ ಫಾರಂ ನಂ.57ರಲ್ಲಿಸಾಗುವಳಿ ಮಾಡುತ್ತಿರುವ ಭೂಮಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ" ಎಂದು ಹೇಳಿದರು.
"ಕಂದಾಯ ಇಲಾಖೆಯಲ್ಲಿ ಫೋನ್ ಮುಖಾಂತರ ಹಲೋ ಕಂದಾಯ ಸಚಿವರೇ ಮೂಲಕ ಈಗಾಗಲೇ 35 ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ. ಫಲಾನುಭವಿಗಳು ಕರೆ ಮಾಡಿದರೆ ಸಾಕು ಅಧಿಕಾರಿಗಳು ಮನೆಯ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳ ಅರ್ಜಿಯನ್ನು ಪಡೆದು ಮೂರು ದಿನಗಳ ಒಳಗಾಗಿ ಪರಿಹರಿಸಲಿದ್ದಾರೆ. ಕಂದಾಯ ಇಲಾಖೆ ಸರಕಾರದ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ರಾಜ್ಯ ಬಿಜೆಪಿ ಸರಕಾರ ಮಾಡುತ್ತಿದೆ" ಎಂದು ಹೇಳಿದರು.

"ಭೂ ಪರಿ ವರ್ತನೆಗೆ ಕಾನೂನು ಬದಲಾವಣೆ ಮಾಡಿ ಒಂದು ವಾರದೊಳಗೆ ಭೂ ಪರಿವರ್ತನೆ ಮಾಡಿಕೊಡಲಾಗುವುದು, ಭೂ ಪರಿವರ್ತನಗೆ ಜಿಲ್ಲಾಧಿಕಾರಿಗಳ ಸಹಿ ಅಗತ್ಯವಿರುವುದಿಲ್ಲ, ಒಮ್ಮೆ ಭೂ ಪರಿವರ್ತನೆ ದಾಖಲೆಗಳನ್ನು ಅಪ್‌ಲೋಡ್ ಮಾಡಿದರೆ ಒಂದು ವಾರದಲ್ಲಿ ಭೂ ಪರಿವರ್ತನೆಯ ದಾಖಲೆ ನಿಮ್ಮ ಕೈಸೇರಲಿದೆ" ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೆಂಪೇಗೌಡರ ಪುತ್ಥಳಿ ರಥ ಯಾತ್ರೆಗೆ ಚಾಲನೆ ನೀಡಿದ್ದ ಅಶೋಕ್, "ಗುಜರಾತಿನಲ್ಲಿ ಸರದಾರ್ ವಲ್ಲಬಾಯಿ ಪಟೇಲ್ ಪುತ್ಥಳಿ ನಿರ್ಮಿಸಿರುವ ಮಾದರಿಯಲ್ಲಿ ರಾಜ್ಯದಲ್ಲಿ ಬೆಂಗಳೂರು ನಿರ್ಮಾತ ಕೆಂಪೇಗೌಡರ ಪುತ್ಥಳಿಕೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಈ ಪುತ್ಥಳಿಕೆಯ ಜೂತೆಗೆ ಪಕ್ಕದಲ್ಲಿಯೇ ರಾಜ್ಯದ ಎಲ್ಲಾ ಗ್ರಾಮಗಳಿಂದ ಮೃತ್ತಿಕೆಯನ್ನು ಸಂಗ್ರಹಿಸಿ ಥೀಮ್ ಪಾರ್ಕ್ ಮಾಡಲಾಗುವುದು. ಮೃತ್ತಿಕೆ ಸಂಗ್ರಹವನ್ನು ಕೆಂಪೇಗೌಡರ ಪುತ್ಥಳಿಕೆ ರಥ ಯಾತ್ರೆಯ ಜೊತೆಗೆ ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿ, "ರಾಹುಲ್ ಗಾಂಧಿಯವರು ಕಾಂಗ್ರೆಸ್ ಜೋಡೋ ಕಾರ್ಯಕ್ರಮ ರಾಜ್ಯದಲ್ಲಿ ಪ್ರವೇಶಿಸಿದ ನಂತರ ಕಾಂಗ್ರೆಸ್ ಪಕ್ಷದಲ್ಲಿನ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಉತ್ತರ-ದಕ್ಷಿಣ ಅಗಿರುವುದು ಸ್ವಷ್ಟವಾಗಿದೆ. ಕಾಂಗ್ರೆಸ್ ಜೋಡೋ ಬದಲೂ ಕಾಂಗ್ರೆಸ್ ತೋಡೋ ಅಗಿದೆ. ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ತಳ ಊರಲು ಬಿಡುವುದಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷವು ನಾಶದ ಪಥದತ್ತ ಸಾಗಿ ಹಂತ,ಹಂತವಾಗಿ ಮುಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ನೆಲೆ ಇಲ್ಲದಂತಾಗುವುದು" ಎಂದು ಭವಿಷ್ಯ ನುಡಿದರು.












Click it and Unblock the Notifications