Kolar Ticket: ಒಬ್ಬರಿಗೆ ಒಂದೇ ಟಿಕೆಟ್ ಎನ್ನುವ ಹಠದಲ್ಲಿ ಗೆದ್ದ ಡಿಕೆಶಿ, ಖರ್ಗೆ- ಸೋತ ಸಿದ್ದರಾಮಯ್ಯ
ಕೋಲಾರ, ಏಪ್ರಿಲ್ 15: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಕಾಂಗ್ರೆಸ್ ( Congress ) ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ( Laxman Savadi ), ಮಾಜಿ ಸಚಿವ ಶಿವಲಿಂಗೇಗೌಡ ಸೇರಿದಂತೆ ಹಲವು ಪ್ರಮುಖರಿಗೆ ಪಕ್ಷ ಮಣೆ ಹಾಕಿದೆ.
ಕೋಲಾರದಿಂದ ಸಿದ್ದರಾಮಯ್ಯಗಿಲ್ಲ ಟಿಕೆಟ್
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಆದರೆ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲೇ ಕಾಣಿಸಿಕೊಂಡಿತ್ತು. ಅವರು ತಮ್ಮ ತವರು ಕ್ಷೇತ್ರವಾದ ವರುಣಾದಲ್ಲಿ ಕಣಕ್ಕಿಳಿದಿದ್ದಾರೆ. ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕೋಲಾರಕ್ಕೆ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಎರಡು ಕ್ಷೇತ್ರದಲ್ಲಿನ ಸ್ಪರ್ಧೆ ಬಗ್ಗೆ ಎದ್ದಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ.

ಒಬ್ಬರಿಗೆ ಒಂದೇ ಟಿಕೆಟ್ ಎಂದಿದ್ದ ಡಿಕೆಶಿ
ಒಬ್ಬರಿಗೆ ಒಂದೇ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿದ್ದರು. ಅವರ ಮಾತಿನಂತೆ ಇಂದಿನ ಪಟ್ಟಿಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಕ್ಕೆ ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ. ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಸಂಘರ್ಷದಲ್ಲಿ ಡಿಕೆಶಿಗೆ ಗೆಲುವು ಸಿಕ್ಕಂತಾಗಿದೆ.
ಕೋಲಾರ ಸ್ಪರ್ಧೆ ಬೇಡವೆಂದ ಸಿದ್ದರಾಮಯ್ಯ ಹಿತೈಷಿಗಳು
ಸಿದ್ದರಾಮಯ್ಯನವರ ನಿಷ್ಠಾವಂತರಾದ ಮಾಜಿ ಸಚಿವ ಕೆಜೆ ಜಾರ್ಜ್, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸೇರಿದಂತೆ ಹಲವರು ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ತವರು ಕ್ಷೇತ್ರವಾದ ಮೈಸೂರು ಜಿಲ್ಲೆಯ ವರುಣಾ ಸಿದ್ದರಾಮಯ್ಯನವರಿಗೆ ಸೇಫ್ ಕ್ಷೇತ್ರವೆಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹಿತೈಷಿಗಳು ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೇಲವ ವರುಣಾದಿಂದ ಮಾತ್ರ ಸ್ಪರ್ಧಿಸಲು ಸಿದ್ದರಾಮಯ್ಯ ಒಲವು ತೋರಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಭೇಟಿಗೂ ಮುನ್ನ ಟಿಕೆಟ್ ಬಿಡುಗಡೆ
ಪ್ರಮುಖವಾಗಿ, ಮುಂಬರುವ ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುವ ಮೊದಲು ಪ್ರಕಟಿಸಿದೆ. ಮೋದಿ ಉಪನಾಮೆಯನ್ನು ವಿವಾದ ಹುಟ್ಟುಹಾಕಿದ ಕೋಲಾರದಲ್ಲೇ ಅವರು ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಈ ಉಪನಾಮೆ ವಿವಾದದಿಂದ ರಾಹುಲ್ ಗಾಂಧಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ. ಇದಕ್ಕೊಸ್ಕರ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಮೋದಿ ಉಪನಾಮದ ಬಗ್ಗೆ ಟೀಕೆ ಮಾಡಿದ ಅದೇ ಸ್ಥಳದಲ್ಲಿ ಗಾಂಧಿ ಅವರು ಭಾನುವಾರ ಕೋಲಾರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ಮೂಲಗಳ ಪ್ರಕಾರ, ಎಐಸಿಸಿ ಮಾಜಿ ಅಧ್ಯಕ್ಷರು ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ, ಕೋಲಾರಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಪಕ್ಷ ಆಯೋಜಿಸಿರುವ 'ಜೈ ಭಾರತ್' ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ, ಬೆಂಗಳೂರಿನ ಕರ್ನಾಟಕ ಕೆಪಿಸಿಸಿ ಕಚೇರಿ ಬಳಿ ಹೊಸದಾಗಿ ನಿರ್ಮಿಸಲಾದ 'ಇಂದಿರಾ ಗಾಂಧಿ ಭವನ'ವನ್ನು ರಾಹುಲ್ ಗಾಂಧಿ ಉದ್ಘಾಟಿಸಲಿದ್ದಾರೆ.












Click it and Unblock the Notifications