Lok Sabha Election 2024: ಬಿಟ್ಬಿಡು ಮಾವಾ.. ಬಿಡೆನು ಅಳಿಯ! ಕೋಲಾರದಲ್ಲಿ 'ಕೈ' ಟಿಕೆಟ್‌ಗಾಗಿ ಫೈಟ್
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಹಿಡಿತವನ್ನು ಹೊಂದಿರುವ ಕೆ.ಎಚ್.ಮುನಿಯಪ್ಪರಿಗೆ ಟಿಕೆಟ್ ನೀಡಿದರೆ ಉತ್ತಮ ಎಂಬ ಮಾತು ಕೇಳಿಬರುತ್ತಿದೆ. ಇದರ ನಡುವೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ ಜೋರಾಗಿದ್ದು, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಅವರ ಅಳಿಯ ಚಿಕ್ಕಪೆದ್ದಣ್ಣ ಹೆಸರು ಬಲವಾಗಿ ಕೇಳಿಬರುತ್ತಿದೆ.
ಕೋಲಾರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದರೂ ಪಕ್ಷದಲ್ಲಿನ ಭಿನ್ನಾ ಭಿಪ್ರಾಯಗಳಿಂದ ಕೆ.ಎಚ್. ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಸೋತಿದ್ದರು. ಆದರೆ ಈ ಬಾರಿ ಅಧಿಕಾರ ಪಡೆದುಕೊಳ್ಳಲು ಕಾಂಗ್ರೆಸ್ ನಾನಾ ಕಸರತ್ತು ನಡೆಸುತ್ತಿದ್ದು, ಟಿಕೆಟ್‌ಗೆ ತೀವ್ರ ಪೈಪೋಟಿ ಎದುರಾಗಿದೆ.

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಟಿಕೆಟ್ ಯಾರಿಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಇನ್ನು ರಾಜ್ಯ ಸರಕಾರದಲ್ಲಿ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಚುನಾವಣೆಗೆ ಸ್ಪರ್ಧೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.
ಈ ನಡುವೇ ಕೆ.ಎಚ್.ಮುನಿಯಪ್ಪರನ್ನು ಚುನಾವಣೆಗೆ ನಿಲ್ಲುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದು, ಅನೇಕ ಮುಖಂಡರ ನಿಯೋಗಗಳು ಕೆ.ಎಚ್.ಮುನಿಯಪ್ಪರ ಬಳಿಗೆ ತೆರಳಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಕುರಿತಾಗಿ ಗೊಂದಲಗಳು ಉಂಟಾಗಿರುವ ಕಾರಣ ತಾವೇ ಅಭ್ಯರ್ಥಿಯಾಗಿ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಮನವಿ ಮಾಡುತ್ತಿದ್ದಾರೆ.
ಇದರ ನಡುವೆ ಮತ್ತೊಂದೆಡೆ ಮುನಿಯಪ್ಪ ಬದಲಿಗೆ ಯುವಕ, ಮುನಿಯಪ್ಪ ಅಳಿಯ ಹಾಗೂ ಸರಕಾರಿ ಉದ್ಯೋಗಿಯಾಗಿರುವ ಚಿಕ್ಕಪೆದ್ದಣ್ಣರನ್ನು ರಾಜಕೀಯಕ್ಕೆ ಕರೆತರಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಚಿಂತಾಮಣಿ ತಾಲೂಕಿನ ಕೋಡಿಗಲ್ ಮೂಲದ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡುವುದರಿಂದ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ ಎನ್ನಲಾಗುತ್ತಿದ್ದು ಮುನಿಯಪ್ಪ ಬೆಂಬಲವಿರುವ ಕಾರಣದಿಂದಾಗಿ ಕಾಂಗ್ರೆಸ್ ಸುಲಭವಾಗಿ ಚನಾವಣೆ ಗೆಲ್ಲುತ್ತದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡದಿದ್ದರೂ ಚಿಕ್ಕಪೆದ್ದಣ್ಣ ಅವರು ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ಚಿಂತಾಮಣಿಯವರೇ ಆದ ಹಿನ್ನೆಲೆಯಲ್ಲಿ ಕೋಲಾರ ರಾಜಕೀಯದ ಬಗ್ಗೆ ಅರಿವಿದ್ದು, ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತಾರೆ. ಹೀಗಾಗಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಕೆಲ ಮುಖಂಡರು ಪಕ್ಷದ ನಾಯಕರ ಮೇಲೆ ಒತ್ತಡ ಹಾಕಿದ್ದಾರೆ.
ಪ್ರಾಬಲ್ಯ ಉಳಿಸಿಕೊಳ್ಳಲು ಟಿಕೆಟ್ ಅನಿವಾರ್ಯ: ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಬಣದ ಪ್ರಾಬಲ್ಯ ಮುಂದುವರಿಸ ಬೇಕಾದರೆ ಮುನಿಯಪ್ಪರಿಗೆ ಟಿಕೆಟ್ ನೀಡ ಬೇಕು. ಮುನಿಯಪ್ಪ ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕಿದಂತಹ ಸಂದರ್ಭ ದಲ್ಲಿ ಕೆಎಚ್‌ಎಂ ಪುತ್ರ ಅಥವಾ ಅಳಿಯನಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಸಂಬಂಧ ಬಿಸಿ ಬಿಸಿ ಚರ್ಚೆಗಳು ಜೋರಾಗಿದ್ದು, ಈ ಬಾರಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಕುತೂಲಹವೂ ಕಂಡುಬರುತ್ತಿದೆ. ಏನೇ ಆದರೂ ಹೈಕಮಾಂಡ್ ಗಳ ತೀರ್ಮಾನ ಅಂತಿಮವಾಗಿರುವುದರಿಂದ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣಕ್ಕೆ ಇನ್ನಷ್ಟು ದಿನ ಕಾಯಲೇಬೇಕಾಗಿದೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ತೀವ್ರ ಪೈಪೋಟಿಯಿದ್ದು, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಅವರ ಅಳಿಯ ಚಿಕ್ಕಪೆದ್ದಣ್ಣ ಅವರ ಹೆಸರು ಪ್ರಸ್ತಾಪವಾಗಿದೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸಿ.ಲಕ್ಷ್ಮೀನಾರಾಯಣ ಹೇಳಿದರು.
ಲೋಕಸಭೆ ಚುನಾವಣೆಗೆ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಮುನಿಯಪ್ಪ ಸೇರಿದಂತೆ ಹಲವು ಅಭ್ಯರ್ಥಿಗಳ ಪರವಾದ ಅಭಿಪ್ರಾಯ ಬಂದಿದೆ. ಕಾಂಗ್ರೆಸ್ ಶಾಸಕರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.












Click it and Unblock the Notifications