KGF Constituency: ಹೆಚ್ಚಾದ ಮತದಾರರ ಓಲೈಕೆ, ಗೆಲುವು ಯಾರ ಪಾಲಿಗೆ? ಹಿಡಿತ ಸಾಧಿಸಲು ಕಾಂಗ್ರೆಸ್-ಬಿಜೆಪಿ ಸಜ್ಜು
ಬಿಜೆಪಿ-ಕಾಂಗ್ರೆಸ್ ಕೆಜಿಎಫ್ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಕ್ಷೇತ್ರದಲ್ಲಿನ ಗೆಲುವು, ಆರೋಪಗಳ ಲೆಕ್ಕಾಚಾರ, ವರದಿ ವಿಶ್ಲೇಷಣೆ ಇಲ್ಲಿದೆ.
ಕೋಲಾರ, ಮಾರ್ಚ್ 19: ಕೋಲಾರ ಜಿಲ್ಲೆಯಲ್ಲಿರುವ 'ಕೋಲಾರ್ ಗೋಲ್ಡ್ ಫಿಲ್ಡ್' (ಕೆಜಿಎಫ್) ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಆಡಳಿತವಿದೆ. ಇಲ್ಲಿ ರೂಪಕಲಾ ಶಿಶಧರ್ ಅವರು ಚುನಾಯಿತರಾಗಿದ್ದಾರೆ. ಈ ಬಾರಿಯು ಅವರೇ ಕೈ ಪಕ್ಷ ಅಭ್ಯರ್ಥಿ ಎಂದು ಕೆಪಿಸಿಸಿ ಘೋಷಿಸಿದೆ.
ಈ ಕೆಜಿಎಫ್ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಓಡಾಡಿದ ಸ್ಥಳ. ದ್ರಾವಿಡ ಚಳವಳಿಗಾರ ಪೆರಿಯಾರ್, ಪಂಡಿತ್ ಅಯೋತಿದಾಸ್ ಸೇರಿದಂತೆ ಅನೇಕರು ಪ್ರಭಾವ ಹೊಂದಿರುವ ನೆಲ ಇದಾಗಿದೆ. ಕಾರ್ಮಿಕ ಚಳವಳಿಗಳು ಆರಂಭವಾಗಿದ್ದೇ ಇಲ್ಲಿ. ಕೋಲಾರ ಈ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಳಲ್ಲಿ ಅಗೆಯುತ್ತಿದ್ದ ಕಾರ್ಮಿಕರು ನ್ಯಾಯಕ್ಕಾಗಿ ಒಂದುಗೂಡಿದರು. ಸಂಘಟಿತರಾಗಿ ಹೋರಾಟ ಮಾಡಿ ಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿದ ಇತಿಹಾಸ ಇದಕ್ಕಿದೆ.

ಕೆಜಿಎಫ್ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಕನ್ನಡಕ್ಕಿಂತಲೂ ಹೆಚ್ಚು ತೆಲುಗು, ತಮಿಳು ಭಾಷೆ ಮಾತನಾಡಬಲ್ಲವರು ಹೆಚ್ಚಿದ್ದಾರೆ. ಕಾರಣ ಜಲ್ಲೆ ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಗಡಿಭಾಗಕ್ಕೆ ಹೊಂದಿಕೊಂಡಿದೆ. ಹೀಗಾಗಿ ಇಲ್ಲಿ ಕನ್ನಡ ಮತ್ತು ತೆಲುಗು ಇದ್ದರೂ ತಮಿಳು ಹೆಚ್ಚು ಪ್ರಭಾವ ಭೀರಿದೆ. ಎಐಎಡಿಎಂಕೆ ಪಕ್ಷ ಇಲ್ಲಿ ಮೂರು ಬಾರಿ ಜಯ ಕಂಡಿದೆ. ಈ ಭಾಗದಲ್ಲಿ ದಲಿತ ಸಮುದಾಯಗಳು ಹೆಚ್ಚಿವೆ. ಅವರು ಬೆಂಬಲಿಸುವ ಆರ್‌ಪಿಐ, ಸಿಪಿಐ, ಸಿಪಿಎಂ ಪಕ್ಷಗಳು ಇಲ್ಲಿ ಗೆಲುವು ಸಾಧಿಸಿವೆ.
ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ಈ ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಲು ಮುಂದಾದರೂ ಸಹ ಆಗೊಮ್ಮೆ ಈಗೊಮ್ಮೆ ಗೆದ್ದವು ವಿನಃ ನಿರಂತರ ಹಿಡಿತ ಸಾಧಿಸುವಲ್ಲಿ ವಿಫಲವಾಗಿವೆ. ಲಭ್ಯ ಮಾಹಿತಿ ಪ್ರಕಾರ ನೋಡುವುದಾದರೆ, ಇಲ್ಲಿ 1967ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಭ್ಯರ್ಥಿ ಎಸ್.ಆರ್.ಗೋಪಾಲ್ ಗೆದ್ದಿದ್ದರು.

ಕಾಂಗ್ರೆಸ್-ಬಿಜೆಪಿಗೆ ಇಲ್ಲಿ ಗೆಲುವಾಗಿದೆ
ನಂತರ ಬಳಿಕ 2008ರಲ್ಲಿ ಬಿಜೆಪಿಯಿಂದ ವೈ. ಸಂಪಂಗಿ ಎಂಬುವವರು ಗೆದ್ದಿದ್ದರೆ, ಮಾರನೇ ಸಲ 2013ರಲ್ಲೂ ಮತ್ತದೇ ಕಮಲಪಾಳಯದಿಂದ ರಾಮಕ್ಕ ವೈ. ಎಂಬುವವರು ವಿಜಯ ಪತಾಕೆ ಹಾರಿಸಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ರೂಪಕಲಾ ಶಶಿಧರ್ ಎಂಬುವವರು ಸ್ಪರ್ಧಿಸಿ ಚುನಾಯಿತರಾದರು. ಅವರ ವಿರುದ್ಧ ಬಿಜೆಪಿಯ ಅಶ್ವಿನಿ ಸಂಪಂಗಿಯವರು ಶೇ.22ರಷ್ಟು ಮತಗಳ ಅಂತರದಿಂದ ಸೋಲು ಕಂಡಿದ್ದರು.
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಕೋಟ್ಯಾಧಿಪತಿ ಎಂದು ಕರೆಸಿಕೊಳ್ಳುವ ಕೆಜಿಎಫ್ ಬಾಬು ಕೆಜಿಎಫ್‌ನಿಂದ ಟಿಕೆಟ್ ಬಯಸಿದ್ದರು. ಅದಕ್ಕಾಗಿ ಸಾಕಷ್ಟು ಲಾಭಿ ಸಹ ನಡೆದಿತ್ತು ಆದರೆ ಇತ್ತೀಚೆಗೆ ಪ್ರಕಟಗೊಂಡ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಜಿಎಫ್‌ನಿಂದ ರೂಪಕಲಾ ಶಶಿಧರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೋದಲು ತಾವು ಚಿಕ್ಕಪೇಟೆ ಟಿಕೆಟ್ ಆಕಾಂಕ್ಷಿ ಅಂತಲೂ, ಕೆಜಿಎಫ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಅಂತಲೂ ಕೆಜಿಎಫ್ ಬಾಬು ಹೇಳಿಕೊಂಡಿದ್ದರು. ಈ ವಿಚಾರ ರಾಜಕೀಯ ಅಂಗಳದಲ್ಲಿ ತೀವ್ರ ಸದ್ದು ಮಾಡಿತ್ತು.
ಹಾಲಿ ಶಾಸಕಿ ವಿರುದ್ಧ ಆಮೀಷದ ಆರೋಪ
ಇನ್ನೂ ಹಾಲಿ ಶಾಸಕಿ ರೂಪಕಲಾ ಶಶಿಧರ್ ಅವರ ವಿರುದ್ಧ ಮತದಾರರ ಓಲೈಕೆ, ದುಡ್ಡು, ಕಿಟ್ ವಿತರಣೆ ಆರೋಪ ಕೇಳಿ ಬಂದಿದೆ. ಚುನಾವಣೆ ಅಂಗವಾಗಿ ಕ್ಷೇತ್ರ ಜನರಿಗೆ ಫುಡ್ ಕಿಟ್ ನೀಡಲು ಸಜ್ಜಾಗಿದ್ದರು. ಆದರೆ ಅವುಗಳನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ. ಈ ಸುದ್ದಿ ಹೊರ ಬಿದ್ದಿದ್ದೆ ತಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್ ಕೃಷ್ಣ ಅವರು ಶಾಸಕಿಗೆ ಸವಾಲು ಹಾಕಿದ್ದಾರೆ.
ಐದು ವರ್ಷ ಅಭಿವೃದ್ಧಿ ಕೆಲಸ ಮಾಡಿದ್ದರೆ ಈಗ ಮತದಾರರಿಗೆ ಆಮೀಷ ಒಡ್ಡುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಕಿಡಿ ಕಾರಿದ್ದರು. ಹಣ ಕೊಡದೇ ಚುನಾವಣೆ ಎದುರಿಸುವುದಾದರೆ ಕೋಟಿ ಲಿಂಗೇಶ್ವರ ಮತ್ತು ಬಂಗಾರ ತಿರುಪತಿ ದೇವಾಲಯಲಕ್ಕೆ ಬಂದು ಆಣೆ ಮಾಡಿ ಎಂದು ಅವರು ಸವಾಲು ಹಾಕಿದ್ದರು.

ಶಾಸಕಿ ರೂಪಕಲಾ ಅವರು ಒಂದು ಲೋನ್ (ಸಾಲ) ಕೊಡಿಸುವುದಾಗಿ ಮತ್ತೊಂದು ಓ ಶಂಕ್ತಿಯ ಓಲೈಕೆ ಮಾಡಿದ್ದಾರೆ. ಈ ಫುಡ್ ಕಿಟ್ ಡೈರೆಕ್ಟರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡರು ಎಂದು ಮೋಹನ್ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. ಇದೆಲ್ಲವನ್ನು ನೋಡುತ್ತಿದ್ದರೆ ಈ ಸಲ ಕೋಲಾರದಲ್ಲಿ ಚುನಾವಣೆ ಕಾವು ತೀವ್ರ ಸ್ವರೂಪ ಪಡೆಯಲಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಚುನಾವಣಾ ಸಮರ ನಡೆಯಲಿದೆ.
ಇವರು ಟಿಕೆಟ್ ಆಕಾಂಕ್ಷಿಗಳು
ಮುಂಬರಲಿರುವ 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಈ ಹಿಂದೊಮ್ಮೆ ಕೆಜಿಎಫ್‌ನಲ್ಲಿಯೇ ಸ್ಪರ್ಧಿಸಿ ಗೆದ್ದಿದ್ದ ವೈ ಸಂಪಂಗಿ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಈ ಕುರಿತು ತೋಟಗಾರಿಕೆ ಸಚಿವ ಮುನಿರತ್ನ ಸಹ ಹೇಳಿದ್ದರು. ಇನ್ನೂ ಕಾಂಗ್ರೆಸ್‌ನಿಂದ ರೂಪಕಲಾ ಶಶಿಧರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ ಗೆಲುವಿನ ದೃಷ್ಟಿಯಿಂದಾಗಿ ಇದರಲ್ಲಿ ಒಂದಷ್ಟು ಬದಲಾವಣೆಗಳು ಆದರೂ ಅಚ್ಚರಿ ಇಲ್ಲ. ಜೆಡಿಎಸ್‌ನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.











Click it and Unblock the Notifications