ಕೋಲಾರದಲ್ಲೂ ಪ್ರತ್ಯಕ್ಷವಾದ ಪ್ರಚೋದನಕಾರಿ ಪೋಸ್ಟರ್
ಕೋಲಾರ, ಡಿಸೆಂಬರ್ 7: ಮಂಗಳೂರು ನಗರದ ಕೆಲವೆಡೆ ಈಚೆಗೆ ಕಾಣಿಸಿಕೊಂಡಿದ್ದ ಗೋಡೆ ಬರಹ ವಿವಾದಕ್ಕೆ ಕಾರಣವಾಗಿ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಕೋಲಾರದಲ್ಲೂ ಇಂಥ ಪ್ರಚೋದನಕಾರಿ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
ಕೋಲಾರದಲ್ಲಿ ಬಾಬ್ರಿ ಮಸೀದಿ ಕುರಿತು ಪ್ರಸ್ತಾಪಿಸಿ ಪ್ರಚೋದನಕಾರಿ ಪೋಸ್ಟರ್ ಗಳನ್ನು ಅಂಟಿಸಿದ್ದು, ಪಿಎಫ್ ಐ ಸಂಘಟನೆಯ ಹೆಸರಿನಲ್ಲಿ ನಗರದ ಹಲವೆಡೆ ವಿವಾದಿತ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
ಬಾಬರಿ ಒಂದು ದಿನ ಎದ್ದು ನಿಲ್ಲಲಿದೆ, 6 ಡಿಸೆಂಬರ್ 1992 ನಾವು ಮರೆಯದಿರೋಣ ಎಂಬ ಪ್ರಚೋದನಾಕಾರಿ ಸಂದೇಶವಿರುವ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಕೋಲಾರ ನಗರದ ಅಮ್ಮವಾರಿ ಪೇಟೆ ಸರ್ಕಲ್, ಬಂಬೂ ಬಜಾರ್, ಷಯಿನ್ ಷಾ ನಗರ, ಕ್ಲಾಕ್ ಟವರ್ ಸೇರಿ ಹಲವೆಡೆ ಪೋಸ್ಟರ್ ಗಳು ಕಾಣಿಸಿಕೊಂಡಿವೆ.

ಈಚೆಗೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು, ದೇಶದ್ರೋಹಿ ಬರಹವೊಂದನ್ನು ಗೋಡೆಯ ಮೇಲೆ ಬರೆದದ್ದು ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಕಲವೇ ದಿನಗಳ ಅಂತರದಲ್ಲಿ ಅದೇ ರೀತಿಯ ಬರಹ ನಗರದ ಕೋರ್ಟ್ ರಸ್ತೆಯ ಗೋಡೆಯೊಂದರಲ್ಲಿ ಕಾಣಿಸಿಕೊಂಡಿತ್ತು. "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು" ಎಂಬ ಸಂದೇಶದ ಗೋಡೆ ಬರಹ ಕಾಣಿಸಿಕೊಂಡಿತ್ತು. ಸ್ಥಳೀಯರಲ್ಲಿ ಈ ಬೆಳವಣಿಗೆ ಆತಂಕವನ್ನು ತಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಒಬ್ಬನನ್ನು ಬಂಧಿಸಿದ್ದರು.












Click it and Unblock the Notifications