ಜಿಲ್ಲಾಧ್ಯಕ್ಷನನ್ನೇ ತಳ್ಳಿ ಕಾಂಗ್ರೆಸ್ ನಾಯಕರ ಮಾರಾಮಾರಿ!
ಚಿನ್ನದ ನಾಡು ಕೋಲಾರದಲ್ಲಿ ನಿನ್ನೆ ಕಾಂಗ್ರೆಸ್ ನಾಯಕರ ಭಿನ್ನಮತ ಸ್ಫೋಟಗೊಂಡಿದೆ. ವಿವಿಧ ನಾಯಕರ ಗುಂಪುಗಳ ನಡುವೆ ಬೀದಿ ರಂಪಾಟವಾಗಿ, ಮಾರಾಮಾರಿಯೂ ನಡೆದಿರುವುದು ವರದಿಯಾಗಿದೆ. ಪಕ್ಷದ ಜಿಲ್ಲಾಧ್ಯಕ್ಷನನ್ನು ಸಹ ವೇದಿಕೆಯಿಂದ ತಳ್ಳಿರುವ ಘಟನೆ ನಡೆದಿದೆ.
ಮಾಜಿ ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವರಿಗೆ ಈ ಸಭೆಗೆ ಆಹ್ವಾನ ನೀಡಿರಲಿಲ್ಲ. ಇದೇ ವಿಚಾರವಾಗಿ ವಿವಿಧ ನಾಯಕರ ಗುಂಪುಗಳ ನಡುವೆ ಗಲಾಟೆ ಶುರುವಾಗಿ, ಬೀದಿ ರಂಪಾಟವೇ ನಡೆದಿದೆ. ಕಾಂಗ್ರೆಸ್ ಶಾಸಕರ ಎದುರೇ ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ತಳ್ಳಾಟ, ನೂಕಾಟ ಕಂಡು ಶಾಸಕರು ಕೂಡ ಏನು ಮಾಡಲಾರದೆ ಅಸಹಾಯಕರಾಗಿದ್ದಾರೆ.

ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ನಿನ್ನೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಭೆ ಕರೆಯಲಾಗಿತ್ತು. ಮೊದಲಿಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ಗದ್ದಲ ಸೃಷ್ಟಿಸಿದ್ದಾರೆ.
ಮತ್ತೊಂದೆಡೆ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಕೂಡ ಜೋರು ದನಿಯಲ್ಲಿ ಮಾತನಾಡಿದ್ದರು. ಬಳಿಕ ರಮೇಶ್ ಕುಮಾರ್ ಬೆಂಬಲಿಗರು ಗಲಾಟೆಗೆ ಇಳಿದಿದ್ದರು. ರಮೇಶ್ ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಕಡೆಗಣಿಸುತ್ತಿದೆ. ಬ್ಯಾನರ್‌ನಲ್ಲೂ ರಮೇಶ್ ಕುಮಾರ್ ಫೋಟೋ ಹಾಕಿಲ್ಲ ಎಂದು ಗಲಾಟೆ ಶುರು ಮಾಡಿದ್ದರು.
ಈ ರಂಪಾಟದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರನ್ನು ಸಭೆಯಿಂದ ಆಚೆಗೆ ಕಳಿಸಿದ್ದಾರೆ. ಬಳಿಕ ಅಲ್ಲಿದ್ದ ಗುಂಪುಗಳ ನಡುವೆ ಗಲಾಟೆ ತೀವ್ರಗೊಂಡು, ನೂಕಾಟ, ತಳ್ಳಾಟ ಕೂಡ ನಡೆದಿದೆ. ಕೊನೆಗೆ ಪೊಲೀಸರು ಬಂದು ಗಲಾಟೆ ನಿಯಂತ್ರಿಸಿದ್ದಾರೆ.

ಈ ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೆ.ವಿ.ಗೌತಮ್ ಸೇರಿದಂತೆ ನೂರಾರು ಮಂದಿ ಇದ್ದರು. ಇವರ ಸಮ್ಮುಖದಲ್ಲೇ ಗಲಾಟೆ ತಾರಕಕ್ಕೇರಿದೆ.
ಈ ಘಟನೆ ಬಗ್ಗೆ ಮಾತನಾಡಿರುವ ಕೋಲಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ್, ಈ ತಳ್ಳಾಟ ಯಾವ ಕಾರಣಕ್ಕೆ ಆಯಿತು ಎಂಬುದು ನನಗೂ ಗೊತ್ತಿಲ್ಲ. ಗಲಾಟೆಯಲ್ಲಿ ನನ್ನ ಮೇಲೆ ಯಾವುದೇ ಹಲ್ಲೆ ಆಗಿಲ್ಲ. ಮುಖಂಡರಲ್ಲಿ ಯಾವ ವಿಚಾರಕ್ಕೆ ಅಸಮಾಧಾನವಿದೆ ಎಂಬುದನ್ನು ಅವರನ್ನೇ ಕರೆಸಿ ಕೇಳುತ್ತೇವೆ ಎಂದಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮಾತ್ರವಲ್ಲ. ಬಿಜೆಪಿ ಪಕ್ಷದಲ್ಲೂ ಗಲಾಟೆ ಇದೆ. ಇದು ನಮ್ಮ ಕುಟುಂಬದ ಜಗಳ. ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ. ಕೋಲಾರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕರ ನಡುವೆ ಗುಂಪುಗಾರಿಕೆ ಹೆಚ್ಚಾಗಿದೆ ಎನ್ನುವ ಆರೋಪವಿದೆ.












Click it and Unblock the Notifications