Bengaluru-Chennai Expressway; ಮಹತ್ವದ ಸೂಚನೆ ಕೊಟ್ಟ ಸಚಿವರು
ಕೋಲಾರ, ಸೆಪ್ಟೆಂಬರ್ 05; ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಸಚಿವರು ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ಪ್ರಗತಿ ಮತ್ತು ರಾಷ್ಟ್ರೀಯ ಹೆದ್ದಾರಿ NH-75ರ ನಿರ್ವಹಣೆ ಮತ್ತು ಅದರಲ್ಲಿರುವ ಲೋಪಗಳು ಕುರಿತಂತೆ ಸಭೆಯನ್ನು ನಡೆಸಿದರು. ಬೆಂಗಳೂರು ಮತ್ತು ತಮಿಳುನಾಡು ರಾಜಧಾನಿ ಚೆನ್ನೈ ಸಂಪರ್ಕಿಸುವ ರಾಜ್ಯದ ಮಹತ್ವದ ರಸ್ತೆ ಯೋಜನೆ ಕುರಿತು ಚರ್ಚಿಸಿದರು.

ಈ ಸಭೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ, ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿ ಯೋಜನಾ ನಿರ್ದೇಶಕಿ ಅರ್ಚನಾ, ನಗರಾಭಿವೃದ್ದಿ ಇಲಾಖೆಯ ಉಪ ಕಾರ್ಯದರ್ಶಿ ರಘುನಂದನ್, ಭಾರತೀಯ ರಾಷ್ಟ್ರೀಯ ಹೆದ್ದಾರಿಯ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವರ ಸೂಚನೆಗಳು; ಸಭೆಯಲ್ಲಿ ಮಾತನಾಡಿದ ಸಚಿವರು, "ಕೋಲಾರ ಜಿಲ್ಲೆಯ ಭಾಗದಲ್ಲಿ ಹಾದು ಹೋಗುವ ರಸ್ತೆ ನಿರ್ಮಾಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ" ಎಂದು ಅಧಿಕಾರಿಗಳಿಗೆ ಸೂಚಿಸಿದರು.
"ಕೋಲಾರ ಜಿಲ್ಲೆಯಲ್ಲಿ ಹಾದು ಹೋಗುವ 56 ಕಿ. ಮೀ. ವ್ಯಾಪ್ತಿಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 3 ಸ್ಥಳಗಳಲ್ಲಿ ಜಮೀನು ಭೂ-ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ನಿರ್ಮಾಣ ಕಾರ್ಯಕ್ಕೆ ಸಲ್ಪ ಅಡೆತಡೆಯಾಗಿದೆ" ಎಂದು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಚಿವರ ಗಮನ ಸೆಳೆದರು.
ಸಚಿವರು ಕೂಡಲೇ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಜಮೀನಿನ ಮಾಲೀಕರು ಅಡ್ಡಿ ಪಡಿಸುತ್ತಿದ್ದು, ಪೊಲೀಸ್ ಇಲಾಖೆಯ ನೆರವಿನಿಂದ ಅದನ್ನು ತೆರವುಗೊಳಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.
ಸಚಿವರು, "ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿ ನಿರ್ಮಾಣದ ಕಾಮಗಾರಿ ಅದಷ್ಟು ಬೇಗ ಮುಗಿಸಬೇಕು. ಕೋಲಾರ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-75ರ ನಿರ್ವಹಣೆ ಸಮರ್ಪಕವಾಗಿ ಆಗಬೇಕು, ರಸ್ತೆಯಲ್ಲಿ ಯಾವುದಾದರು ಲೋಪದೋಷವಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು" ಎಂದು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳಿಗೆ ಸೂಚಿಸಿದರು.
ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ವೇ; ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ (ಬಿಸಿಇ) 260.85 ಕಿ. ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ-7 ನಾಲ್ಕು ಪಥದ ರಸ್ತೆ ಯೋಜನೆಯಾಗಿದೆ. ಈ ಹೆದ್ದಾರಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂರು ರಾಜ್ಯಗಳನ್ನು ಸಂಪರ್ಕಿಸುತ್ತದೆ.
ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ಆರಂಭವಾಗಿ ಚೆನ್ನೈನ ಶ್ರೀಪೆರಂಬದೂರ್ ತನಕ ಸಾಗಲಿದೆ. ರಾಜ್ಯದಲ್ಲಿ 77.23 ಕಿ. ಮೀ. ಈ ರಸ್ತೆ ಇರಲಿದೆ. ಆಂಧ್ರ ಪ್ರದೇಶದಲ್ಲಿ 91 ಕಿ. ಮೀ. ಹಾಗೂ ತಮಿಳುನಾಡಿನಲ್ಲಿ 116.60 ಕಿ. ಮೀ. ವ್ಯಾಪಿಯನ್ನು ರಸ್ತೆ ಒಳಗೊಂಡಿದೆ.
ಈ ಯೋಜನೆಯ ಯೋಜನಾ ವೆಚ್ಚ ಅಂದಾಜು 40 ಸಾವಿರ ಕೋಟಿ ರೂ.ಗಳು. ಈ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ಶೇ. 40ರಷ್ಟು ಇದೆ. ಕೋಲಾರ ಜಿಲ್ಲೆಯಲ್ಲಿ ಮಾಲೂರು, ಬಂಗಾರಪೇಟೆ, ಕೆಜಿಎಫ್ ಹಾಗೂ ಬೇತಮಂಗಲ ಮೂಲಕ ಬೆಂಗಳೂರು-ಚೆನೈ ಹೆದ್ದಾರಿ ಹಾದು ಹೋಗುತ್ತದೆ.
ಜುಲೈ ತಿಂಗಳಿನಲ್ಲಿ ಟ್ವೀಟ್ ಮಾಡಿದ್ದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಯೋಜನೆಯ ಕಾಮಗಾರಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಬೆಂಗಳೂರು-ಮಾಲೂರು ಸೆಕ್ಷನ್‌ನ ಕೆಲಸಗಳು ಹೇಗೆ ನಡೆಯುತ್ತಿವೆ? ಎಂದು ವಿವರಗಳನ್ನು ನೀಡಿದ್ದರು.
1160 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಮತ್ತು ಮಾಲೂರು ನಡುವಿನ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಭಾರತ್ ಮಾಲಾ ಪರಿಯೋಜನೆ ಅಡಿ ಕೈಗೊಂಡಿರುವ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂರು ರಾಜ್ಯಗಳಲ್ಲಿ ಹಾದು ಹೋಗಲಿದೆ ಎಂದು ಹೇಳಿದ್ದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಅವಧಿ ಕೇವಲ 3 ಗಂಟೆ ಎಂದು ಅಂದಾಜಿಸಲಾಗಿದೆ. ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ, ವೆಂಕಟಗಿರಿ, ಪಲಮನೇರ್, ಬಂಗಾರುಪೆಲ್ಲೆಂ, ಚಿತ್ತೂರು, ರಾಣಿಪೆಟ್ಟೈ ಮತ್ತು ಶ್ರೀಪೆರಂಬೂರು ನಡುವೆ ಈ ರಸ್ತೆ ಹಾದು ಹೋಗಲಿದೆ.












Click it and Unblock the Notifications