Challenging Star Darshan: ಕೋಲಾರ ಮತ್ತು ಬಂಗಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ 'ಡಿ ಬಾಸ್' ಭರ್ಜರಿ ಪ್ರಚಾರ
ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರಿದ್ದು, ಎಲ್ಲಾ ಪಕ್ಷಗಳ ಪರವಾಗಿ ಸ್ಟಾರ್ ಪ್ರಚಾರಕರು ಬೀದಿಗಿಳಿದು ಪ್ರಚಾರ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಏಪ್ರಿಲ್ 28ರಂದು ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.
ಬೆಳಿಗ್ಗೆ 10 ಗಂಟೆಗೆ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ ಅವರು, 11 ಗಂಟೆಗೆ ಬಂಗಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಎಂ. ನಾರಾಯಣಸ್ವಾಮಿ ಪರವಾಗಿ ಮತಯಾಚನೆ ಮಾಡಿದರು. ನಂತರ ಮಧ್ಯಾಹ್ನ 12 ಗಂಟೆಗೆ ಕೋಲಾರ ನಗರದಲ್ಲಿ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸುವ ಮೂಲಕ ವರ್ತೂರು ಪ್ರಕಾಶ್ ಅವರ ಪರವಾಗಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ದರ್ಶನ್ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸಂಭ್ರಮಿಸಿದರು.

ಮಾಲೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.
ಶ್ರೀರಂಗಪಟ್ಟಣದಲ್ಲಿ ಕೂಡ ದರ್ಶನ್ ಭರ್ಜರಿ ಪ್ರಚಾರ
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪರವಾಗಿ ಪ್ರಚಾರ ಮಾಡಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬೆಳಗೊಳ ಹೋಬಳಿಯ ಕೆ.ಆರ್.ಎಸ್, ಬೆಳಗೊಳ, ಪಿ.ಹೊಸಹಳ್ಳಿ, ಪಾಲಹಳ್ಳಿ ಗ್ರಾಮಗಳಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ ಅವರು ಮತಯಾಚನೆ ಮಾಡಿದರು.
ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರಾಜು ಪರವಾಗಿ ಕೂಡ ದರ್ಶನ್ ಮತಯಾಚನೆ ಮಾಡಿದ್ದರು. ಚಲನಚಿತ್ರ ನಿರ್ಮಾಪಕರೂ ಆಗಿರುವ ಮುನಿರಾಜು ಮತ್ತು ದರ್ಶನ್ ಉತ್ತಮ ಬಾಂಧವ್ಯ ಹೊಂದಿದ್ದು ಆರ್ ಆರ್ ನಗರದಲ್ಲಿ ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ದರ್ಶನ್ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ ತಮ್ಮ ಗೆಳೆಯ ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರವಾಗಿ ಕೂಡ ಪ್ರಚಾರ ಮಾಡಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ (ಎಸ್‌ಕೆಪಿ) ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಕೂಡ ದರ್ಶನ್ ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.












Click it and Unblock the Notifications