ಗೋಕರ್ಣ; ಎರಡು ಬೀಚ್‌ಗಳಲ್ಲಿದೆ ಅಪಾಯಕಾರಿ ಒಳಸುಳಿಗಳು
ಗೋಕರ್ಣ, ಆಗಸ್ಟ್ 22; ಉತ್ತರ ಕನ್ನಡದ ಗೋಕರ್ಣದ ಓಂ ಬೀಚ್ ಹಾಗೂ ಮುಖ್ಯ ಕಡಲತೀರಗಳು ಅಪಾಯಕಾರಿ ಬೀಚ್‌ಗಳಾಗಿವೆ. ಈ ಬಗ್ಗೆ ಮಂಗಳೂರಿನ ಖಾಸಗಿ ಕಂಪನಿಯಿಂದ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲೂ ಇದು ಖಚಿತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಎರಡು ಕಡಲತೀರದಲ್ಲಿ ಐದು ಸೆಕೆಂಡ್‌ನಲ್ಲಿ ನೂರು ಮೀಟರ್‌ನಷ್ಟು ಸಮುದ್ರದ ಒಳಗೆ ಎಳೆದುಕೊಂಡು ಹೋಗುವಷ್ಟು ಅಲೆಗಳು ಪ್ರಭಾವವಾಗಿ ಬರುತ್ತವೆ. ಇದು ಸಾಕಷ್ಟು ಅಪಾಯಕಾರಿಯಾಗಿದ್ದು, ಈಜು ಬರುವವರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರವಾಸಿಗರು ಎಚ್ಚೆತ್ತುಕೊಳ್ಳಬೇಕು. ಮಳೆಗಾಲದಲ್ಲಿ ಸಾಕಷ್ಟು ಎಚ್ಚರದಿಂದ ಇರಬೇಕು.
ಪೊಲೀಸ್ ಇಲಾಖೆಯಿಂದ ಸಿಬ್ಬಂದಿ, ಹೋಮ್ ಗಾರ್ಡ್‌ಗಳನ್ನು ಈ ಎರಡು ಕಡಲತೀರದಲ್ಲಿ ನೇಮಕ ಮಾಡಿದ್ದು, ಅಪಾಯಕಾರಿ ಸ್ಥಳದಲ್ಲಿ ತೆರಳದಂತೆ ಬೋರ್ಡ್‌ಗಳನ್ನು ಸಹ ಹಾಕಲಾಗಿದೆ. ಸ್ಥಳದಲ್ಲಿ ಲೈಫ್ ಗಾರ್ಡ್‌ಗಳನ್ನು ಸಹ ನೇಮಕ ಮಾಡಲಾಗಿದೆ. ಆದರೂ ಪ್ರವಾಸಿಗರು ಮುಖ್ಯವಾಗಿ ಎಚ್ಚರದಿಂದ ಇರಬೇಕು.

ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅನಾಹುತ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ವರದಿಯನ್ನು ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಜೊತೆ ಪೊಲೀಸ್ ಇಲಾಖೆ ಸಹ ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಮುದ್ರದಲ್ಲಿ ಪ್ರವಾಸಿಗರು ನಿಗದಿತ ಸ್ಥಳದಲ್ಲಿ ಮಾತ್ರ ಈಜುವಂತೆ ಬಾಯ್‌ಗಳನ್ನು ಹಾಕಲು ನಿರ್ಧರಿಸಿದ್ದು, ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೆಲ್ಫಿ ಕ್ರೇಜ್ ಪ್ರಾಣಕ್ಕೆ ಆಪತ್ತು; ಸೆಲ್ಫಿ ತೆಗೆಯೋದು ಇತ್ತೀಚಿಗೆ ಸ್ಮಾರ್ಟ್ ಫೋನ್ ಬಳಕೆ ಮಾಡುವವರಿಗೆ ಒಂದು ಹವ್ಯಾಸ ಆದಂತಾಗಿದೆ. ಅದರಲ್ಲೂ ತಮ್ಮ ಪರಿಚಯಸ್ಥರ ಜೊತೆ, ಹಬ್ಬ ಹರಿದಿನಗಳಲ್ಲಿ, ಜೊತೆಗೆ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಸೆಲ್ಫಿ ಹುಚ್ಚೆನ್ನುವುದು ಶನಿವಾರ ಗೋಕರ್ಣದ ಓಂ ಕಡಲತೀರದಲ್ಲಿ ಪ್ರವಾಸಿಗನೋರ್ವ ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಮಾರ್ ಕಮಾಟಿ (35) ಸಮುದ್ರ ಪಾಲಾದ ಪ್ರವಾಸಿಗನಾಗಿದ್ದಾನೆ. 12 ಜನ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದನು. ಮಹಾಬಲೇಶ್ವರ ದೇವರ ದರ್ಶನ ಮುಗಿಸಿದ ನಂತರ ಮಧ್ಯಾಹ್ನದ ವೇಳೆಗೆ ಓಂ ಕಡಲತೀರಕ್ಕೆ ಭೇಟಿ ನೀಡಿದ್ದಾನೆ. ಇನ್ನು ಕಡಲತೀರದ ಪಕ್ಕದಲ್ಲೇ ಇರುವ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ.
ಮಳೆಗಾಲ ಆಗಿದ್ದರಿಂದ ಬಂಡೆಗಳ ಮೇಲೆ ಪಾಚಿ ಬೆಳೆದಿದ್ದು, ಜೊತೆಗೆ ಅಲೆಗಳ ಅಬ್ಬರ ಸಹ ಅಧಿಕವಾಗಿತ್ತು. ಸೆಲ್ಫಿ ತೆಗೆಯುವ ವೇಳೆ ಪ್ರವಾಸಿಗ ಕುಮಾರನ ಮೇಲೆ ಅಲೆಯೊಂದು ಅಪ್ಪಳಿಸಿದೆ. ಕ್ಷಣಮಾತ್ರದಲ್ಲಿ ಅಲೆಯ ಜೊತೆಯೇ ಕಡಲಿಗೆ ಕುಮಾರ್ ಬಿದ್ದಿದ್ದು, ಸ್ಥಳದಲ್ಲೇ ಇದ್ದ ಸ್ನೇಹಿತರು ರಕ್ಷಣೆಗೆ ಮುಂದಾಗಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಲೈಫ್ ಗಾರ್ಡ್ ಸಿಬ್ಬಂದಿಗಳು ಸಹ ಆಗಮಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ರಕ್ಷಣೆ ಸಾಧ್ಯವಾಗದೇ ಸಮುದ್ರಲ್ಲಿ ಪ್ರವಾಸಿಗ ನಾಪತ್ತೆಯಾಗಿದ್ದಾನೆ.
ರಕ್ಷಣೆಗೆ ಇಳಿದಿದ್ದ ಲೈಫ್ ಗಾರ್ಡ್ ಸಿಬ್ಬಂದಿ ಸಹ ಅಲೆಗಳ ಅಬ್ಬರಕ್ಕೆ ಸಿಲುಕಿ ಕಲ್ಲುಬಂಡೆಗಳು ತಗುಲಿ ಗಾಯಗೊಂಡಿದ್ದು, ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಪ್ರವಾಸಿಗನ ಮೃತದೇಹದ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ.
ಗೋಕರ್ಣ ಕಡಲ ತೀರದಲ್ಲಿ ಪ್ರವಾಸಿಗರು ಸಮುದ್ರ ಪಾಲಾಗುವುದು ಇದೇ ಮೊದಲಲ್ಲ. ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಪ್ರವಾಸಿಗರು ಅದನ್ನು ಪಾಲನೆ ಮಾಡದೇ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.












Click it and Unblock the Notifications