Kumata-Siddapur Road: ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭ
ಕಾರವಾರ ಜುಲೈ 21: ರಾಜ್ಯದಲ್ಲಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು ನಾನಾ ಕಡೆ ಗುಡ್ಡ, ರಸ್ತೆ ಕುಸಿತದಿಂದಾಗಿ ಸಂಚಾರ ಬಂದ್ ಮಾಡಲಾಗಿದೆ. ಹೀಗೆ ಗುಡ್ಡ ಕುಸಿತದಿಂದಾಗಿ ಎರಡು ದಿನ ಬಂದ್ ಮಾಡಲಾಗಿದ್ದ ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭವಾಗಿದೆ.
ರಸ್ತೆ ಮೇಲೆ ಬಿದ್ದದ್ದ ಮರ, ಮಣ್ಣನ್ನು ಸಿಬ್ಬಂದಿ ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ತಾಲ್ಲೂಕಾಡಳಿತ ಮಕ್ತಗೊಳಿಸಿಕೊಟ್ಟಿದೆ. ಕೆಲ ದಿನಗಳ ಹಿಂದೆ ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಸಮೀಪ ಗುಡ್ಡು ಕುಸಿದಿತ್ತು. ಇದರಿಂದಾಗಿ ಇಲ್ಲಿನ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು.

ರಸ್ತೆ ಮೇಲೆ ಸುಮಾರು ಐವತ್ತು ಮೀಟರ್ ವ್ಯಾಪ್ತಿಯಲ್ಲಿ ಮರ, ಮಣ್ಣು ಬಿದ್ದಿತ್ತು. ಎಕರೆಗಳಷ್ಟು ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿದ ಹಿನ್ನೆಲೆ ಕುಮಟಾ-ಸಿದ್ಧಾಪುರ ರಸ್ತೆ ಎರಡು ದಿನ ಬಂದ್ ಮಾಡಲಾಗಿತ್ತು. ಕುಮಟಾ-ಸಿದ್ದಾಪುರ ರಸ್ತೆಯ ಭಯಾನಕ ಭೂಕುಸಿತ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸಿಬ್ಬಂದಿ ರಸ್ತೆ ಮೇಲೆ ಬಿದ್ದದ್ದ ಮರ, ಮಣ್ಣು ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಕುಮಟಾ-ಸಿದ್ದಾಪುರ ನಡುವಿನ ಸಂಚಾರ ಪುನರಾರಂಭವಾಗಿದೆ. ಇದೇ ಜುಲೈ 19ರಂದು ಅಂಕೋಲಾದ ಶಿರೂರು, ಕುಮಟಾದ ಬರ್ಗಿ ಬಳಿಕ ಇದೀಗ ಸಿದ್ದಾಪುರ ಕುಮಟಾ ಮಾರ್ಗದ ಉಳ್ಳೂರಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿತ್ತು.
ಸುಮಾರು ಮುಕ್ಕಾಲು ಕಿಲೋಮಿಟರ್ ದೂರದಿಂದ ಗುಡ್ಡ ಕುಸಿದು ಬಂದು ರಸ್ತೆಯ ಮೇಲೆ ಬಿದ್ದಿತ್ತು. ಗುಡ್ಡ ಕುಸಿಯುತ್ತಲೇ ಇದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರಿಂದ ಈ ಭಾಗದ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಸುಮಾರು ಒಂದು ಎಕರೆಗೂ ಅಧಿಕ ಜಾಗದಲ್ಲಿ ಗುಡ್ಡಕುಸಿತವಾಗಿದ್ದು, ಇದರಿಂದ ಕುಮಟಾ-ಸಿದ್ದಾಪುರ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಬೃಹತ್ ಪ್ರಮಾಣದಲ್ಲಿ ಮರಗಳು ರಸ್ತೆಯಲ್ಲಿ ಮೇಲೆ ಬಂದು ಬಿದ್ದಿದ್ದವು. ಘಟನೆಯಿಂದಾಗಿ ಸುತ್ತಲ ಜನರು ಆತಂಕಗೊಂಡಿದ್ದರು. ಆದರೀಗ ಈ ರಸ್ತೆಯನ್ನು ಸಂಚಾರಕ್ಕೆ ಸುಗಮಗೊಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಆತಂಕ
ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಬೈಂದೂರಿನ ಪ್ರಸಿದ್ಧ ಪ್ರವಾಸಿ ತಾಣ ಸೋಮೇಶ್ವರದ ಗುಡ್ಡ ಕುಸಿತವಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಇನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ತಗ್ಗು ಪ್ರದೇಶಗಳಲ್ಲಿ ನೆರೆಹಾವಳಿ ಮುಂದುವರೆದಿದೆ. ಭಾರಿ ಮಳೆಗೆ ಬೈಂದೂರಿನ ಪ್ರವಾಸಿ ತಾಣವಾಗಿರುವ ಸೋಮೇಶ್ವರ ಬೀಚ್ ಬಳಿಯ ಗುಡ್ಡ ಕುಸಿದು ಸ್ಥಳೀಯರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದೀಗ ಕೊಂಚ ಬಿಡುವು ಕೊಟ್ಟಿದೆ. ಆದರೆ ಮಳೆಯಿಂದ ಉಂಟಾಗುತ್ತಿರುವ ಅವಾಂತರ ಮಾತ್ರ ಕಡಿಮೆಯಾಗಿಲ್ಲ. ಅಲ್ಲದೆ ಚಿಕ್ಕಮಗಳೂರು ನಗರದಿಂದ ದತ್ತಪೀಠಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಕವಿಕಲ್ ಗುಂಡಿ ಬಳಿ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣು ಮತ್ತು ಕಲ್ಲು ಬಿದ್ದಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದತ್ತಪೀಠಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.












Click it and Unblock the Notifications