ಉತ್ತರ ಕನ್ನಡ: 90 ಕೆರೆಗಳಿಗೆ ಕಾಯಕಲ್ಪ, ಅಮೃತ ಸರೋವರ ಸ್ಥಳಗಳಲ್ಲಿ ಹಾರಾಡಲಿದೆ ರಾಷ್ಟ್ರಧ್ವಜ
ಕಾರವಾರ, ಆಗಸ್ಟ್ 08: ಅಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ 90 ಕೆರೆ ಹಾಗೂ ಜಲಮೂಲಗಳಿಗೆ ಕಾಯಕಲ್ಪ ಕಲ್ಪಿಸಿದ್ದು, ಇದೀಗ ಅಮೃತ ಸರೋವರದ ಸ್ಥಳಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣಕ್ಕೆ ಜಿಲ್ಲಾ ಪಂಚಾಯಿತಿ ಸಿದ್ಧತೆ ಮಾಡತೊಡಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಜಿಲ್ಲೆಯಲ್ಲಿ 100 ಕಡೆ ಅಮೃತ ಸರೋವರ ನಿರ್ಮಾಣದ ಗುರಿ ನೀಡಿದ್ದು. ಜಿಲ್ಲೆಯ 12 ತಾಲೂಕುಗಳಲ್ಲಿ 90 ಅಮೃತ ಸರೋವರ ಕಾಮಗಾರಿ ಪೂರ್ಣಗೊಂಡಿದೆ. ಇಂತಹ ಪ್ರದೇಶದಲ್ಲಿ ಇದೀಗ ಧ್ವಜಾರೋಹಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ನನ್ನ ಮಣ್ಣು ನನ್ನ ದೇಶ ಅಭಿಯಾನ
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಈ ಬಾರಿ ಮೇರಾ ಮಾಟಿ, ಮೇರಾ ದೇಶ್(ನನ್ನ ಮಣ್ಣು ನನ್ನ ದೇಶ) ಅಭಿಯಾನ ಕೈಗೊಂಡಿದೆ. ಇದರ ಅಂಗವಾಗಿ ಭೂತಾಯಿಗೆ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ 2023ರ ಆಗಸ್ಟ್ 15ರೊಳಗೆ ನಿಗದಿತ ಸಮಯಕ್ಕೆ ಪೂರ್ಣಗೊಂಡ ಎಲ್ಲ ಅಮೃತ ಸರೋವರ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಾಡಲಿದೆ.
ಜಲ ಸಂರಕ್ಷಣೆ ಕುರಿತ ಜಾಗೃತಿ ಚಟುವಟಿಕೆಗಳು
ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಿದ ಧ್ವಜಾರೋಹಣದ ಅಂಗವಾಗಿ ಚುನಾಯಿತ ವಿಶೇಷ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಕೆರೆ ನೀರು ಬಳಕೆದಾರರ ಸಂಘದ ಸದಸ್ಯರು ಹಾಗೂ ಶಾಲಾ-ಕಾಲೇಜುಗಳ ಮಕ್ಕಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಂಡು ಜಲ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತ ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ.
ಆಗಸ್ಟ್ 15ರಂದು ಬೆಳಗ್ಗೆ ನಡೆಯುವ ತಿರಂಗಾ ಯಾತ್ರೆ ಇಡೀ ಗ್ರಾಮದಲ್ಲಿ ಸಂಚರಿಸಿ ಅಮೃತ ಸರೋವರ ಸ್ಥಳ ತಲುಪಿ ಮುಕ್ತಾಯವಾಗಲಿದೆ. ನಂತರ ಅರಣ್ಯೀಕರಣ ಹಿನ್ನಲೆಯಲ್ಲಿ ಅಮೃತ ಸರೋವರದ ಆವರಣದಲ್ಲಿ ಸಸಿ ನೆಡುವ ಕಾರ್ಯ ಹಾಗೂ ಗ್ರಾಮ ಸಮುದಾಯದ ಸದಸ್ಯರಲ್ಲಿ ಅಮೃತ ಸರೋವರ ಸುತ್ತಮುತ್ತ ಹಾಗೂ ನೀರಿನ ಸ್ವಚ್ಛತೆ ಕಾಪಾಡುವಂತೆ ಸ್ವಚ್ಚತಾ ಪ್ರತಿಜ್ಞೆ ಬೋಧಿಸಲಾಗುತ್ತದೆ.

ಗ್ರಾಮೀಣ ಕ್ರೀಡೆಗಳ ಆಯೋಜನೆಗೆ ಸಿದ್ಧತೆ
76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ಅಮೃತ ಸರೋವರಗಳಲ್ಲಿ ಗ್ರಾಮೀಣ ಆಟಗಳನ್ನು ಆಯೋಜನೆ ಮಾಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ತಿರ್ಮಾನಿಸಿದೆ. ಆದ್ದರಿಂದ ಸಾಂಪ್ರದಾಯಿಕ ಗ್ರಾಮೀಣ ಆಟಗಳಾದ ಲಗೋರಿ, ಹಗ್ಗ ಜಗ್ಗಾಟ, ಖೋ-ಖೋ, ಹಗ್ಗ ಜಿಗಿತ (ರೋಪ್ ಜಂಪಿಂಗ್), ಕುಂಟ ಓಟ, ಕುರ್ಚಿ ಓಟ ಸೇರಿದಂತೆ ಇತರೆ ಕ್ರೀಡಾ ಚಟುವಟಿಕೆಗಳು ಇರಲಿವೆ. ಜೊತೆಗೆ ಅಮೃತ ಸರೋವರ ತಾಣಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಮಕ್ಕಳಿಗೆ ಸಂಬಂಧಿಸಿದಂತೆ ಪ್ರಬಂಧ, ಭಾಷಣ, ಚರ್ಚಾಕೂಟ, ರಂಗೋಲಿ, ಚಿತ್ರಕಲೆಯಂತಹ ಇತರೆ ಸ್ಪರ್ಧಾ ಚಟುವಟಿಕೆಗಳನ್ನೂ ಸಹ ಆಯೋಜಿಸಲಾಗುತ್ತದೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗಾಗಿ ಶಿಲಾಫಲಕ ನಿರ್ಮಾಣ
ಎಲ್ಲಾ ಅಮೃತ ಸರೋವರಗಳ ಸ್ಥಳಗಳಲ್ಲಿ ಶಿಲಾಫಲಕ ನಿರ್ಮಿಸಲಾಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಗಳು, ಸಿಬ್ಬಂದಿ(ರಾಜ್ಯ ಪೊಲೀಸರು ಸೇರಿದಂತೆ) ಕರ್ತವ್ಯದ ಸಾಲಿನಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾಫಲಕದಲ್ಲಿ ಬರೆಸಲಾಗುತ್ತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದುವೇಳೆ ವೀರರು ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಸಮರ್ಪಣೆ ಶಿಲಾಫಲಕ ನಿರ್ಮಿಸುವ ಮೂಲಕ ವೀರರಿಗೆ ಗೌರವ ಸಮರ್ಪಿಸಲಾಗುತ್ತಿದೆ.

ಇಲಾಖೆ ಸುತ್ತೋಲೆಯಂತೆ ಕ್ರಮ
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಪಿಡಿಒ, ಅಧಿಕಾರಿಗಳು, ಸಿಬ್ಬಂದಿ ಗ್ರಾಮೀಣ ಜನರು ಹಾಗೂ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಉತ್ತಮ ಅವಕಾಶ ಕಲ್ಪಿಸಿದೆ. ಹೀಗಾಗಿ ಇಲಾಖೆಯ ಸುತ್ತೋಲೆ ಪ್ರಕಾರ ಜಿಲ್ಲೆಯ 90 ಅಮೃತ ಸರೋವರಗಳ ದಂಡೆಯಲ್ಲಿ ವಿವಿಧ ಚಟುವಟಿಕೆಗಳನ್ನು ಒಳಗೊಂಡ ಕಾರ್ಯಕ್ರಮ ರೂಪಿಸಲು ಈಗಾಗಲೇ ಎಲ್ಲ ತಾಪಂ ಇಒ, ನರೇಗಾ ಎಡಿ, ಗ್ರಾಪಂ ಪಿಡಿಒ ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಈಶ್ವರ ಕಾಂದೂ ತಿಳಿಸಿದ್ದಾರೆ.












Click it and Unblock the Notifications