Kumar Bangarappa: ಉತ್ತರ ಕನ್ನಡದಲ್ಲಿ ಫುಲ್ ಆಕ್ಟಿವ್ ಆದ ಕುಮಾರ್ ಬಂಗಾರಪ್ಪ, ಸಿಕ್ಕೆ ಬಿಡ್ತಾ ಟಿಕೆಟ್?
ಉತ್ತರ ಕನ್ನಡ, ಮಾರ್ಚ್ 23: ರಾಜ್ಯದ ಇಪ್ಪತ್ತು ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಿ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ದೊಡ್ಡ ಬಂಢಾಯವನ್ನೇ ಎದುರಿಸುತ್ತಿದೆ. ಪಕ್ಷದ ಪ್ರಮುಖ ನಾಯಕರು ಬಂಡಾಯ ಎದ್ದಿದ್ದು, ಭಿನ್ನಾಭಿಪ್ರಾಯ ಶಮನಕ್ಕೆ ಯತ್ನಿಸುತ್ತಿದೆ. ಇದೇ ವೇಳೆ ಟಿಕೆಟ್ ಘೋಷಣೆ ಮಾಡದ ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಂಡಿದೆ.
ಮೂರು ದಶಕಗಳಿಂದ ಬಿಜೆಪಿ ಭ್ರಕೋಟೆಯಾಗಿರುವ ಉತ್ತರ ಕನ್ನಡ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿಲ್ಲ. ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಬಗ್ಗೆ ಪಕ್ಷದಲ್ಲೇ ಅಂತಹ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿಲ್ಲ. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕಷ್ಟ. ಇದೇ ಕಾರಣಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ ಮೂಡಿದೆ. ಈಗ ಇದ್ದಕ್ಕಿದ್ದಂತೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಕ್ಷೇತ್ರದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ.

ಉತ್ತರ ಕನ್ನಡದಲ್ಲಿ ಕುಮಾರ್ ಬಂಗಾರಪ್ಪಗೆ ಟಿಕೆಟ್!
ಹೌದು... ಸೊರಬ ಕ್ಷೇತ್ರದಿಂದ ವಿಧಾನಸಭಾ ಚುನಾವಣೆ ಸೋತ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಲೋಕಸಭಾ ಚುನಾವಣೆ ಬೆನ್ನಲ್ಲೇ ಉತ್ತರ ಕನ್ನಡ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರ ಹೆಸರು ಮೊದಲಿಗೆ ಕಾಣಿಸಿಕೊಳ್ಳುತ್ತಿದೆ. ಪಕ್ಷದ ಹಿರಿಯ ನಾಯಕರನ್ನು ಕುಮಾರ್ ಬಂಗಾರಪ್ಪ ಭೇಟಿಯಾಗುತ್ತಿದ್ದಾರೆ.
ಬಿಜೆಪಿಯಲ್ಲಿ ಮಾಜಿ ಶಾಸಕರು, ಹಾಲಿ ಶಾಸಕರನ್ನು ಕಣಕ್ಕೆ ಇಳಿಸಲಾಗುತ್ತಿದ್ದು, ತಮಗೂ ಅವಕಾಶ ಸಿಗುವ ಭರವಸೆಯಲ್ಲಿ ಇದ್ದಾರೆ ಕುಮಾರ್ ಬಂಗಾರಪ್ಪ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕುಮಾರ್ ಬಂಗಾರಪ್ಪ ಹೆಸರು ಚರ್ಚೆಗೆ ಬಂದಿದೆ ಎನ್ನಲಾಗಿದೆ. ಇತ್ತೀಚೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದಲ್ಲದೆ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೂ ಕುಮಾರ್ ಬಂಗಾರಪ್ಪ ಹಾಜರಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಹೀಗಾಗಿಯೇ ಕುಮಾರ್ ಬಂಗಾರಪ್ಪ ಉತ್ತರ ಕನ್ನಡದಿಂದ ಕಣಕ್ಕಿಳಿಯುವುದು ಗ್ಯಾರೆಂಟಿ ಎನ್ನಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಸುಲಭದಲ್ಲಿ ಗೆಲುವು ಸಾಧಿಸುತ್ತಿದ್ದ ಬಿಜೆಪಿಗೆ ಈ ಬಾರಿ ಅಭ್ಯರ್ಥಿ ಬದಲಾವಣೆ ಸವಾಲಾಗಿ ಪರಿಣಮಿಸಿದೆ. ಕುಮಾರ್ ಬಂಗಾರಪ್ಪ ಅವರ ಜೊತೆಗೆ ಈ ಕ್ಷೇತ್ರಕ್ಕೆ ಹರಿಪ್ರಕಾಶ್ ಕೋಣೆಮನೆ, ಚಕ್ರರ್ತಿ ಸೂಲಿಬೆಲೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರುಗಳು ಕೇಳಿಬರುತ್ತಿವೆ.
ಇವರುಗಳ ಜೊತೆಗೆ ಅಚ್ಚರಿ ಎನ್ನುವಂತೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ, ಅನಂತ ಕುಮಾರ ಹೆಗಡೆ ಅವರ ಆಪ್ತ ಶಶಿಭೂಷಣ್ ಹೆಗಡೆ ಹೆಸರು ಕೂಡ ಉತ್ತರ ಕನ್ನಡಕ್ಕೆ ಕೇಳಿಬರುತ್ತಿದೆ. ಶಶಿಭೂಷಣ್ ಹೆಗಡೆಗೂ ಹೈಕಮಾಂಡ್ ಮಣೆ ಹಾಕಿದರೂ ಅಚ್ಚರಿಯಿಲ್ಲ. ಆದರೆ, ಕ್ಷೇತ್ರದಲ್ಲಿ ಸದ್ಯ ಆಕ್ಟಿವ್ ಆಗಿ ಇರುವುದು ಮಾತ್ರ ಸದ್ಯಕ್ಕೆ ಕುಮಾರ್ ಬಂಗಾರಪ್ಪ. ಈಡಿಗರಿಗರ ಮತ ಸೆಳೆಯುವುದು ಕೂಡ ಬಿಜೆಪಿ ಲೆಕ್ಕಾಚಾರ.
ಡಾ.ಅಂಜಲಿ ನಿಂಬಾಳ್ಕರ್ ಕೈ ಅಭ್ಯರ್ಥಿ
ಇತ್ತ, ಮತ್ತೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ಕಾಂಗ್ರೆಸ್ ಅಳೆದು ತೂಗಿ ಡಾ. ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್ ನೀಡಿದೆ. ಮಹಿಳಾ ಮತದಾರರು ಮತ್ತು ಮರಾಠಾ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಇವರನ್ನು ಕಣಕ್ಕಿಳಿಸಿದೆ. 8.07 ಲಕ್ಷದಷ್ಟು ಮಹಿಳಾ ಮತದಾರರು ಮತ್ತು 2.02 ಲಕ್ಷ ಮರಾಠಾ ಮತಗಳಿದ್ದು ಅವರನ್ನು ಸೆಳೆಯುವ ಪ್ರಯತ್ನ ಮಾಡ್ತಿದೆ ಕಾಂಗ್ರೆಸ್.












Click it and Unblock the Notifications