ರಸ್ತೆ ಅಪಘಾತಕ್ಕೆ ಬೆಚ್ಚಿಬಿದ್ದ ರಾಜ್ಯ: ಯಲ್ಲಾಪುರದಲ್ಲಿ 9 ಸಾವು, ರಾಯಚೂರಿನಲ್ಲಿ 4 ಸಾವು
ಕಾರವಾರ, ಜನವರಿ 22: ಕರ್ನಾಟಕದ ಪಾಲಿಗೆ ಬುಧವಾರ ಕರಾಳವಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತಗಳು ನಡೆದಿವೆ. ಯಲ್ಲಾಪುರದಲ್ಲಿ 9 ಜನರು ಸಾವನ್ನಪ್ಪಿದ್ದು, ರಾಯಚೂರಿನಲ್ಲಿ 4 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಎರಡೂ ಅಪಘಾತಗಳು ಸೇರಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಯಲ್ಲಾಪುರದಲ್ಲಿ ಲಾರಿ ಪಲ್ಟಿ: ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ 9 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ. ಈ ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಅಪಘಾತ ನಡೆದಿದೆ. 25ಕ್ಕೂ ಅಧಿಕ ಜನರು ತರಕಾರಿ ತುಂಬಿದ್ದ ಲಾರಿಯಲ್ಲಿ ಕುಳಿತಿದ್ದರು. ಲಾರಿ ಸವಣೂರಿನಿಂದ ಕುಮಟಾಗೆ ಹೊರಟಿತ್ತು.
ಮುಂಜಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಮಂಜು ಆವರಿಸಿತ್ತು. ರಸ್ತೆ ಸರಿಯಾಗಿ ಕಾಣದ ಹಿನ್ನಲೆಯಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ಪಲ್ಟಿಯಾಗಿದೆ. ಮೃತಪಟ್ಟವರೆಲ್ಲರೂ ಸವಣೂರು ಮೂಲದವರು ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತರಕಾರಿ ರಾಶಿಯ ಅಡಿ ಸಿಲುಕಿರುವ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ಸಚಿವರ ಸಂತಾಪ: ರಸ್ತೆ ಅಪಘಾತ ಪ್ರಕರಣದ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯಿಂದ ಕುಮಟಾ ಕಡೆಗೆ ವ್ಯಾಪಾರಕ್ಕೆಂದು ತರಕಾರಿ ಹಾಗೂ ಹಣ್ಣುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಸುಕಿನ ಜಾವ ಪಲ್ಟಿಯಾಗಿ 9 ಜನ ಮೃತ ಪಟ್ಟ ಘಟನೆಯ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಯಿತು ಎಂದು ಸಂತಾಪ ಸೂಚಿಸಿದ್ದಾರೆ.
ಹೊಟ್ಟೆ ಪಾಡಿಗಾಗಿ ತಮ್ಮ ದಿನನಿತ್ಯ ಜೀವನ ಸಾಗಿಸಲು ಬೇರೆ ಊರುಗಳಿಂದ ವ್ಯಾಪಾರಕ್ಕೆ ಬಂದವರು ಕ್ರೂರ ವಿಧಿಯ ಆಟಕ್ಕೆ ಬಲಿಯಾಗಿದ್ದು ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 16 ಜನರು ಶೀಘ್ರವೇ ಗುಣ ಮುಖರಾಗಿಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ 4 ಸಾವು: ಕ್ರೂಸರ್ ಆಕ್ಸೆಲ್ ಕಟ್ ಆಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಮೃತಪಟ್ಟವರೆಲ್ಲಾ ವಿದ್ಯಾರ್ಥಿಗಳು.
ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಈ ಘಟನೆ ನಡೆದಿದೆ. ಮೃತಪಟ್ಟವರೆಲ್ಲಾ ಮಂತ್ರಾಲಯದ ಸಂಸ್ಕೃತ ವಿದ್ಯಾಲಯದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಈ ರಸ್ತೆ ಅಪಘಾತದ ಕುರಿತು ಮಂತ್ರಾಲಯದ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾಹಿತಿಯನ್ನು ಪಡೆದಿದ್ದಾರೆ. ಘಟನೆಯಲ್ಲಿ 10ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಕ್ರೂಸರ್ ಚಾಲನ ಜಂಸಾಲಿ ಶಿವ, ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ(22), ಅಭಿಲಾಷ (20) ಎಂದು ಗುರುತಿಸಲಾಗಿದೆ.
ಕ್ರೂಸರ್ ವಾಹನದಲ್ಲಿ 14 ಮಂದಿ ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹತಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದರು. ಈ ವೇಳೆ ಆಕ್ಸೆಲ್ ಕಟ್ ಆಗಿ, ವಾಹನ ಪಲ್ಪಿಯಾಗಿದೆ.












Click it and Unblock the Notifications