ವಿಡಿಯೋ; ಕರ್ಫ್ಯೂ ಇದ್ದರೂ ಫಾಲ್ಸ್‌ಗೆ ಬಂದವರಿಗೆ ಲಾಠಿ ರುಚಿ
ಕಾರವಾರ, ಜುಲೈ 05; ಕೋವಿಡ್ ಲಾಕ್‌ಡೌನ್ ಇದ್ದರೂ ಸಿದ್ದಾಪುರ ತಾಲೂಕಿನ ನಿಪ್ಳಿ ಸಮೀಪದ ಹುಸೂರು ಜಲಪಾತಕ್ಕೆ ಬಂದಿದ್ದ ಪ್ರವಾಸಿಗರು ಸ್ಥಳೀಯರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
ಕೊರೊನಾ ಕಾರಣ ಗ್ರಾಮಸ್ಥರು ಗ್ರಾಮಕ್ಕೆ ಹೊರ ಭಾಗದಿಂದ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಇದೀಗ ಅನ್‌ಲಾಕ್ ಮಾಡಿರುವ ಕಾರಣ ಹೊರ ಜಿಲ್ಲೆಗಳಲ್ಲಿದ್ದ ತಮ್ಮೂರಿನವರಿಗೆ ಪ್ರವೇಶ ನೀಡಿದರೂ, ನಿಪ್ಳಿ ಸಮೀಪದ ಹುಸೂರು ಫಾಲ್ಸ್‌ಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಆದರೆ ಭಾನುವಾರ ವಾರಾಂತ್ಯದ ಕರ್ಫ್ಯೂ ಇದ್ದರೂ ಶಿವಮೊಗ್ಗದ ಶಿಕಾರಿಪುರದಿಂದ ಪ್ರವಾಸಿಗರ ತಂಡವೊಂದು ಫಾಲ್ಸ್‌ಗೆ ಭೇಟಿ ನೀಡಲು ಆಗಮಿಸಿದೆ. ಈ ವೇಳೆ ಗ್ರಾಮಸ್ಥರು ಹೊರ ಭಾಗದವರಿಗೆ ಕೋವಿಡ್ ಕಾರಣ ಪ್ರವೇಶ ನಿರ್ಬಂಧವಿದೆ. ಈ ಬಗ್ಗೆ ಬೋರ್ಡ್ ಕೂಡ ಹಾಕಿದ್ದೇವೆ ಎಂದು ತಿಳಿಸಿದ್ದಾರೆ.

ಆಗ ಪ್ರವಾಸಿಗರು ಸ್ಥಳೀಯ ಜನರ ಮೇಲೆ ರೇಗಾಡಿದ್ದಾರೆ. ನಾವು ಹೋಗುತ್ತೇವೆ, ಗ್ರಾಮಕ್ಕೆ ಬರುವ ಮೊದಲೇ ನೀವು ಹೇಳಬೇಕಿತ್ತು ಎಂದೆಲ್ಲ ಹಠ ಹಿಡಿದಿದ್ದಾರೆ. ಇದೇ ವಿಚಾರವಾಗಿ ಪ್ರವಾಸಿಗರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದ್ದು, ಗ್ರಾಮಸ್ಥರು ಬೀಟ್ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಕೋವಿಡ್ ಹಾಗೂ ವಾರಾಂತ್ಯದ ಲಾಕ್‌ಡೌನ್ ಇದ್ದರೂ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಪ್ಳಿ ಸಮೀಪದ ಹುಸೂರು ಜಲಪಾತಕ್ಕೆ ಬಂದಿದ್ದ ಶಿವಮೊಗ್ಗ ಭಾಗದ ಪ್ರವಾಸಿಗರ ತಂಡ ಸ್ಥಳೀಯರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ಘಟನೆ ನಡೆದಿದೆ. '#Uttarakannada #Weekendcurfew #Tourists pic.twitter.com/dzWeFNWfME
— oneindiakannada (@OneindiaKannada) July 5, 2021
ಪೊಲೀಸ್ ಸಿಬ್ಬಂದಿ ಹೇಳಿದರು ಕೂಡ ಪ್ರವಾಸಿಗರು ಕೇಳದೇ ಫಾಲ್ಸ್ ಗೆ ತೆರಳಿದ್ದರು. ಕೊನೆಗೆ 112 ತುರ್ತು ಸೇವೆಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದು, ಫಾಲ್ಸ್ ಗೆ ತೆರಳುತ್ತಿದ್ದವರನ್ನು ಪೊಲೀಸ್ ಸಿಬ್ಬಂದಿ ಹುಡುಕಿ ಹುಡುಕಿ ಬೆತ್ತದ ರುಚಿ ತೋರಿಸಿದ್ದಾರೆ.
ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದು ಬುದ್ಧಿವಾದ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಕೋವಿಡ್ ಕಾಲದಲ್ಲಿ ಪ್ರವಾಸ ಹೋಗುವ ಮುನ್ನ ಸ್ಥಳೀಯರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯುವುದು ಉತ್ತಮ.












Click it and Unblock the Notifications