ನೆಲ ಕಚ್ಚಿದ ಉತ್ತರ ಕನ್ನಡ ಪ್ರವಾಸೋದ್ಯಮ; ಶಾಸಕಿ ಅಸಮಾಧಾನ

ಕಾರವಾರ, ಸೆಪ್ಟೆಂಬರ್ 27: ಇಂದು ವಿಶ್ವದಾದ್ಯಂತ ಪ್ರವಾಸೋದ್ಯಮ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಕೋವಿಡ್‌ನಿಂದ ಮುಗ್ಗರಿಸಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಲು ಕೆಲವೆಡೆ ವಿವಿಧ ಪ್ರವಾಸಿ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಆದರೆ ಕಾರವಾರದಲ್ಲಿ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕಿಗೆ ಆಹ್ವಾನ ನೀಡದ್ದಕ್ಕೆ ಸ್ವತಃ ಶಾಸಕಿಯೇ ವೇದಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಉತ್ತರ ಕನ್ನಡದ ಪ್ರವಾಸೋದ್ಯಮ ನೆಲಕಚ್ಚಿದೆ. ಯಾವ ತಾಲೂಕಿನಲ್ಲೂ ಪ್ರವಾಸಿ ಚಟುವಟಿಕೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಯಾವುದೇ ಆಕರ್ಷಕ ಚಟುವಟಿಕೆಗಳು ನಡೆಯದ ಕಾರಣ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಇಳಿಕೆಯಾಗಿದೆ.‌ ಇದರಿಂದಾಗಿ ಪ್ರವಾಸೋದ್ಯಮ ಕ್ಷೇತ್ರವನ್ನೇ ನಂಬಿಕೊಂಡಿದ್ದವರು ವ್ಯಾಪಾರ, ವಹಿವಾಟು ಇಲ್ಲದೆ, ಸಾಲಸೋಲ ಮಾಡಿಕೊಂಡು ತಲೆ ಮೇಲೆ ಕೈಹೊತ್ತಿ ಕೂರುವಂತಾಗಿದೆ.

 Tourism Sectors Most Affected In Uttara Kannada Says Roopali Naik

ಜಿಲ್ಲೆಯ ಪ್ರವಾಸೋದ್ಯಮ ಇಷ್ಟು ಅಧೋಗತಿ ತಲುಪಿರುವಾಗ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜನಗೊಳಿಸಬೇಕಾಗಿದ್ದ ಪ್ರವಾಸೋದ್ಯಮ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಅಷ್ಟಕ್ಕೂ ಇಲಾಖೆಯಲ್ಲಿ ಜಿಲ್ಲೆಗೆ ಓರ್ವ ಉಪನಿರ್ದೇಶಕರೂ ಇಲ್ಲ. ಅಭಿವೃದ್ಧಿಗೆ ಸಂಬಂಧಿಸಿ ಕಳೆದ ನಾಲ್ಕೈದು ವರ್ಷದಿಂದ ಒಂದೂ ಸಭೆ ನಡೆದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯನ್ನೂ ರದ್ದುಪಡಿಸಲಾಗಿದೆ.

ಇವೆಲ್ಲ ನ್ಯೂನ್ಯತೆಗಳ ನಡುವೆ ಪ್ರವಾಸೋದ್ಯಮ ಇಲಾಖೆ ಇಂದು ಕಾರವಾರದಲ್ಲಿ ಜಿಲ್ಲಾ ಮಟ್ಟದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಕರಾಗಿ ಆಗಮಿಸಿದ್ದರೆ, ವಿವಿಧೆಡೆಯ ಉದ್ಯಮಿಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ ಕಾರ್ಯಕ್ರಮ ನಡೆಯುವ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕಗೆ ಇಲಾಖೆಯಿಂದ ಆಹ್ವಾನಿಸಿರಲಿಲ್ಲ. ಇದರಿಂದಾಗಿ ಸಿಟ್ಟಿಗೆದ್ದ ಶಾಸಕಿ ಕಾರ್ಯಕ್ರಮ ಆರಂಭವಾದ ಬಳಿಕ ಬಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಅಲ್ಲದೇ ಸಚಿವ ಶಿವರಾಮ ಹೆಬ್ಬಾರ್ ಬಳಿಯೂ ಈ ಬಗ್ಗೆ ದೂರು ನೀಡಿದ್ದಾರೆ.

 Tourism Sectors Most Affected In Uttara Kannada Says Roopali Naik

ಈ ಬಗ್ಗೆ ಕಾರ್ಯಕ್ರಮದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯ್ಕ, ಪ್ರವಾಸೋದ್ಯಮ ಇಲಾಖೆಯಿಂದ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಸಿದರೂ ಕೂಡ ನನಗೆ ಮಾಹಿತಿ ನೀಡಿಲ್ಲ. ಕಳೆದ ಮೂರ್ನಾಲ್ಕು ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಶಾಸಕರ ಒಂದೇ ಒಂದು ಸಭೆ ಕರೆದಿಲ್ಲ. ಅಧಿಕಾರಿಗಳು ಸ್ಥಳೀಯರಿಗೆ ಉದ್ಯೋಗವಕಾಶ ನೀಡುವ ಬದಲು ಹೊರ ಭಾಗದವರನ್ನು ಕರೆತಂದು ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಇದೆಲ್ಲವೂ ನಿಲ್ಲಬೇಕು. ತಕ್ಷಣ ಜಿಲ್ಲೆಯ ಎಲ್ಲ ಶಾಸಕರ, ಇಲ್ಲವೇ ಕಾರವಾರದಲ್ಲಿ ಆದರೂ ಸಭೆ ನಡೆಸಬೇಕು ಎಂದು ಸೂಚಿಸಿದರು.

ಇನ್ನು ಮಾಧ್ಯಮದವರಿಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕಿ, "ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗೆ ವರ್ಷದಿಂದ ವೇತನವಾಗುತ್ತಿಲ್ಲ. ಸ್ಥಳೀಯವಾಗಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯವಾಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನಾವೇನೆ ಸೂಚನೆ ನೀಡಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನು ಮುಂದೆ ಯಾವುದೇ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಿದರೆ ಈ ಬಗ್ಗೆ ಪ್ರತಿಭಟನೆ ಎದುರಿಸಬೇಕಾದೀತು" ಎಂದು ಎಚ್ಚರಿಸಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕೇಳಿದರೆ, ಮುಂದೆ ಈ ರೀತಿ ತಪ್ಪಾಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದಷ್ಟೇ ಹೇಳಿದರು‌. ಅಸಲಿಗೆ ಪ್ರವಾಸೋದ್ಯಮ ಇಲಾಖೆಯಿಂದ ಶಾಸಕರ ಕಚೇರಿಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಲಾಗಿದೆಯಂತೆ. ಆದರೆ ಅಂದು ಶಾಸಕಿ ಇರದ ಕಾರಣ ಕಚೇರಿಯಲ್ಲಿದ್ದವರ ಬಳಿ ಆಮಂತ್ರಣ ಪತ್ರಿಕೆ ಕೊಟ್ಟು ಬರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+