ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರ್ವಹಣೆಗೆ 3.50 ಕೋಟಿ ಖರ್ಚು ಮಾಡಿದ್ರೂ ಕೈಕೊಡುತ್ತೆ ಮೈಕ್!!

|
Google Oneindia Kannada News

ಕಾರವಾರ, ಜನವರಿ 22: ಕಾರವಾರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಜಯಶ್ರೀ ಮೊಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಗೌಜಿ- ಗದ್ದಲಗಳು ಕೇಳಿಬಂತು. ಪ್ರಮುಖವಾಗಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅವರ ಧರಣಿ, ಕಾಮಗಾರಿಗೂ ಮುನ್ನ ಬಿಲ್ ಪಾವತಿ, ಸಭಾಂಗಣ ನಿರ್ವಹಣೆಗೆ ಕೋಟಿ ವೆಚ್ಚದ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ಸಭೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಿಹಿ ನೀರು ಸಿಗುವ ಪ್ರದೇಶವನ್ನು ಬಿಟ್ಟು ಉಪ್ಪುನೀರು ಇರುವ ಭಾಗದಲ್ಲೇ ಜೆಜೆಎಂ ಅಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವ ಬಗ್ಗೆ ಪುಷ್ಪಾ ನಾಯ್ಕ ಗಮನ ಸೆಳೆದರು. ಕಾಮಗಾರಿ ಪೂರ್ಣಗೊಂಡಿರುವ ಕಡೆ ಉದ್ಘಾಟನೆಗೆ ವಿಳಂಬ ಆಗುತ್ತಿರುವ ಬಗ್ಗೆ ಪ್ರದೀಪ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಧರಣಿ ಕುಳಿತ ಸದಸ್ಯ!

ಧರಣಿ ಕುಳಿತ ಸದಸ್ಯ!

ಎರಡು ವರ್ಷ ಕಳೆದರೂ ಪ್ರಾರಂಭವಾಗದ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಸಾಮಾನ್ಯ ಸಭೆ ನಡೆಯುತ್ತಿದ್ದ ಪಂಚಾಯತಿ ಸಭಾಂಗಣದಲ್ಲೇ ಧರಣಿ ಕುಳಿತ ಘಟನೆ ನಡೆದಿದೆ.

ಗ್ಲಾಸ್ ಒಡೆದಿದ್ದೇ ನೆಪ: ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕಾಂಗ್ರೆಸ್ ಸದಸ್ಯರಿಂದ ಧರಣಿಗ್ಲಾಸ್ ಒಡೆದಿದ್ದೇ ನೆಪ: ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕಾಂಗ್ರೆಸ್ ಸದಸ್ಯರಿಂದ ಧರಣಿ

ಹೊನ್ನಾವರ ತಾಲ್ಲೂಕಿನ ಪಾವಿನಕುರ್ವಾ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ 18 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗಿತ್ತಾದರೂ, ಅರೆಬರೆಯಾಗಿ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಕಳೆದ ಬಾರಿ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಸದಸ್ಯ ಶಿವಾನಂದ ಕಡತೋಕಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಕಾಮಗಾರಿ ಬಗ್ಗೆ ಶುಕ್ರವಾರದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಕಾಮಗಾರಿ ಪ್ರಾರಂಭಿಸದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೆ ಸ್ಪಷ್ಟ ಮಾಹಿತಿ ನೀಡುವವರೆಗೂ ಧರಣಿ

ಸಭೆಗೆ ಸ್ಪಷ್ಟ ಮಾಹಿತಿ ನೀಡುವವರೆಗೂ ಧರಣಿ

ಈ ವೇಳೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿರುವುದಾಗಿ ಸಭೆಯ ಗಮನಕ್ಕೆ ತಂದಾಗ ಸಿಟ್ಟಾದ ಅವರು, ಶುಕ್ರವಾರ ಬೆಳಿಗ್ಗೆ ಅದೇ ಪ್ರದೇಶಕ್ಕೆ ತೆರಳಿ ಬಂದಿದ್ದೇನೆ. ಆದರೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿರುವುದಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಅಧಿಕಾರಿಗಳು ಹೇಳುವುದು ನಿಜವೇ ಆಗಿದ್ದರೆ ನನ್ನ ಸದಸ್ಯ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡುತ್ತೇನೆ. ಮಾಹಿತಿ ಸುಳ್ಳಾದರೆ ಅಧಿಕಾರಿ ರಾಜೀನಾಮೆ ನೀಡಲಿ. ಈ ಬಗ್ಗೆ ಸಭೆಗೆ ಸ್ಪಷ್ಟ ಮಾಹಿತಿ ನೀಡುವವರೆಗೂ ಧರಣಿ ನಡೆಸುವುದಾಗಿ ಪಟ್ಟು ಹಿಡಿದು ಸಭಾಂಗಣದ ಅಧ್ಯಕ್ಷರ ಮುಂದೆಯೇ ಧರಣಿ ಕುಳಿತರು. ಕೊನೆಗೆ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಇಒ ಎಂ.ಪ್ರಿಯಾಂಗ, ಕಾಮಗಾರಿ ಪ್ರಾರಂಭವಾಗದೇ ಇದ್ದಲ್ಲಿ ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದರು. ಸಿಇಒ ಮನವೊಲಿಕೆ ಬಳಿಕ ಧರಣಿ ಹಿಂಪಡೆದ ಸದಸ್ಯ ಶಿವಾನಂದ ಕಡತೋಕ, ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಕಾಮಗಾರಿಗೂ ಮುನ್ನ ಬಿಲ್ ಪಾವತಿ

ಕಾಮಗಾರಿಗೂ ಮುನ್ನ ಬಿಲ್ ಪಾವತಿ

ಕಾಮಗಾರಿ ಪೂರ್ಣಗೊಳಿಸದೇ ಕಾಮಗಾರಿಗೂ ಮುನ್ನ ಬಿಲ್ ಪಾವತಿ ಮಾಡಿಸಿಕೊಂಡಿರುವ ಕುರಿತು ಸದಸ್ಯ ಅಲ್ಬರ್ಟ್ ಡಿಕೋಸ್ತಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸದ ಅವರು, ವರ್ಷದ ಹಿಂದಿನ ಪ್ರವಾಹ ಕಾಮಗಾರಿಗಳು ಈವರೆಗೆ ಪೂರ್ಣಗೊಂಡಿಲ್ಲ. ಸಣ್ಣ ನೀರಾವರಿ ಇಲಾಖೆಯಿಂದ ಆದ ಬಹುತೇಕ ಕಾಮಗಾರಿಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ಕಾಮಗಾರಿ ಪೂರ್ಣಗೊಳ್ಳದೇ ಬಿಲ್ ನೀಡಿದ್ದ ಉದಾಹರಣೆಗಳಿರಲಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಈ ಸಂಸ್ಕೃತಿ ಬೆಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಪದ ಕೆಲಸದಲ್ಲಿ ಭಾಗಿಯಾಗಲು ನಾನು ಸಿದ್ಧನಿಲ್ಲ

ಪಾಪದ ಕೆಲಸದಲ್ಲಿ ಭಾಗಿಯಾಗಲು ನಾನು ಸಿದ್ಧನಿಲ್ಲ

ಸರ್ಕಾರದ ಹಣವನ್ನು ಏಕೆ ಅನಾವಶ್ಯಕವಾಗಿ ದುರ್ಬಳಕೆ ಮಾಡಲಾಗುತ್ತದೆ? ಯಾರು ಜವಾಬ್ದಾರರು? ಈ ಹಿಂದೆಯೇ ಈ ಬಗ್ಗೆ ಗಮನಕ್ಕೆ ತಂದರೂ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಏಕೆ ಕ್ರಮವಾಗುತ್ತಿಲ್ಲ? ಎಂದು ಕಿಡಿಕಾರಿದರು. ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಈ ವಿಚಾರವಾಗಿ ಗಮನಕ್ಕೆ ತಂದ ಬಳಿಕ ಒಂದು ಲೋಡ್ ಮಣ್ಣು, ಕಲ್ಲುಗಳನ್ನು ತಂದು ಕಾಮಗಾರಿಯಾದಂತೆ ನಾಟಕವಾಡುತ್ತಿದ್ದಾರೆ. ಇದರಿಂದಾಗಿ ಜನರು ಹಾಗೂ ನಾವು ಕಷ್ಟ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಜನರಿಗೆ ಸೌಲಭ್ಯ ನೀಡದೇ ಗುತ್ತಿಗೆದಾರರಿಗೆ ಹಣ ಪಾವತಿಸುವಂಥ ಪಾಪದ ಕೆಲಸದಲ್ಲಿ ಭಾಗಿಯಾಗಲು ನಾನು ಸಿದ್ಧನಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಿಇಒ ಪ್ರಿಯಾಂಗಾ ಪ್ರತಿಕ್ರಿಯಿಸಿ, ಸಣ್ಣ ನೀರಾವರಿ ಇಲಾಖೆ ನಡೆಸಿದ ಎಲ್ಲಾ ಕಾಮಗಾರಿಗಳ ಮಾಹಿತಿ ಪಡೆದುಕೊಂಡು ಯಾವ ರೀತಿ ಬಿಲ್ ಮಾಡಲಾಗಿದೆ? ಕೆಲಸ ಎಷ್ಟು ಪೂರ್ಣಗೊಂಡಿದೆ ಎನ್ನುವುದನ್ನು ಪರಿಶೀಲಿಸಿ ತಪ್ಪಾಗಿದ್ದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸಭಾಂಗಣ ನಿರ್ವಹಣೆಗೆ 5 ವರ್ಷಕ್ಕೆ 3.50 ಕೋಟಿ

ಸಭಾಂಗಣ ನಿರ್ವಹಣೆಗೆ 5 ವರ್ಷಕ್ಕೆ 3.50 ಕೋಟಿ

ಸಭೆಗಳಲ್ಲಿ ಪ್ರತಿ ಬಾರಿಯೂ ಕೈಕೊಡುವ ಮೈಕ್‌ಗಳ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಕೂಡ ಸಭೆಯಲ್ಲಿ ಮೈಕ್ ಕೈಕೊಟ್ಟಿದ್ದು, ಸರಿಪಡಿಸಿಕೊಡುವುದಾಗಿ ಸಿಇಒ ತಿಳಿಸಿದರು. ಆದರೆ, ಈ ಬಗ್ಗೆ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಜಿ.ಎನ್.ಹೆಗಡೆ ಮುರೇಗಾರ ಮಾತನಾಡಿ, ಪ್ರತಿ ವರ್ಷ ಜಿಲ್ಲಾ ಪಂಚಾಯತಿ ಸಭಾಂಗಣದ ನಿರ್ವಹಣೆಗೆ 70 ಲಕ್ಷ ರೂ.ನಂತೆ ಈವರೆಗಿನ ಐದು ವರ್ಷಕ್ಕೆ 3.50 ಕೋಟಿ ರೂ. ವ್ಯಯಿಸಲಾಗಿದೆ. ಆದರೆ ಮಾಡಿದ್ದೇನು? ಇದು ಮುಂದೆ ಈ ವೆಚ್ಚಗಳು ಹೆಚ್ಚಾಗುತ್ತ ಹೋಗಲಿದೆ, ಆದರೆ ಕೆಲಸಗಳು ಪರಿಣಾಮಕಾರಿಯಾಗಿ ಆಗಿರುವುದಿಲ್ಲ. ಹೀಗಾದರೆ ಜಿಲ್ಲೆಯ ಅಭಿವೃದ್ಧಿ ಹೇಗೆ? ಎಂದು ಪ್ರಶ್ನಿಸಿದರು.

ಬಾಟಲಿ ಬದಲು ಲೋಟದಲ್ಲಿ ನೀರು ಕೊಡುತ್ತಿದ್ದೀರಿ

ಬಾಟಲಿ ಬದಲು ಲೋಟದಲ್ಲಿ ನೀರು ಕೊಡುತ್ತಿದ್ದೀರಿ

ಉಷಾ ಹೆಗಡೆ ಮಾತನಾಡಿ, ಮೈಕ್‌ಗಳಿಗೆ ಶೆಲ್ ಬದಲಿಸುತ್ತೇವೆ ಎನ್ನುತ್ತೀರಿ. ಸಭಾಂಗಣದ ಕಸದ ಬುಟ್ಟಿಯಲ್ಲಿ ಶೆಲ್‌ಗಳ ರಾಶಿ ಬಿದ್ದಿವೆ. ಪ್ಲಾಸ್ಟಿಕ್‌ನಿಂದ ಪರಿಸರ ಮಾಲಿನ್ಯವಾಗುತ್ತೆಂದು ಬಾಟಲಿಗಳ ಬದಲು ಲೋಟದಲ್ಲಿ ನೀರು ಕೊಡುತ್ತಿದ್ದೀರಿ. ಹಾಗಿದ್ದರೆ ಶೆಲ್‌ಗಳ ಕಥೆ ಏನು? ನಿರ್ವಹಣೆಗೆಂದು ಕೋಟಿಗಟ್ಟಲೆ ಹಣವನ್ನು ಬೇಕಾಬಿಟ್ಟಿ ವ್ಯಯಿಸಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಹಣ ಕೇಳಿದರೆ ಅನುದಾನ ಇಲ್ಲ ಎನ್ನುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Recommended Video

ಸಚಿವರ ಅಸಮಾಧಾನ ಶಮನಕ್ಕೆ ಹಂಚಿಕೆಯಾದ ಖಾತೆ ಮತ್ತೊಮ್ಮೆ ಬದಲಿಸಲು CM Yediyurappa ನಿರ್ಧಾರ | Oneindia Kannada
ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರ್ಥ

ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರ್ಥ

ಪುಷ್ಪಾ ನಾಯ್ಕ, ಅಲ್ಬರ್ಟ್ ಡಿಕೋಸ್ತಾ ಸೇರಿದಂತೆ ಹಲವರು ಇವರ ಮಾತಿಗೆ ದನಿಗೂಡಿಸಿದರು. ಅಲ್ಲದೇ, ಜಿ.ಎನ್.ಹೆಗಡೆ ಮುರೇಗಾರ ಅವರು ಮೈಕ್ ಅನ್ನು ಅಧ್ಯಕ್ಷರಿಗೆ ತೆಗೆದುಕೊಂಡು ಹೋಗಿ ನೀಡಿದರು. ಇದೇ ವೇಳೆ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಅವರು, ನಿರ್ಮಿತಿ ಕೇಂದ್ರದವರು ಮೈಕ್‌ಗಳನ್ನು ಪರಿಶೀಲಿಸಿ ಹೋಗಿದ್ದಾರೆ ಎಂದು ಹೇಳಿದ್ದಕ್ಕೆ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಸಮಧಾನಗೊಂಡು, ಜಿಲ್ಲಾ ಪಂಚಾಯತಿಯಲ್ಲೇ ಎಂಜಿನಿಯರಿಂಗ್ ವಿಭಾಗ ಇದೆ. ಹಾಗೆ ನಿರ್ಮಿತಿ ಕೇಂದ್ರಕ್ಕೆ ವಹಿಸಲು ಬರುವುದಿಲ್ಲ. ನಿರ್ಮಿತಿಗೆ ಕೊಟ್ಟಿದ್ದೀರಿ ಎಂದರೆ ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರ್ಥ ಎಂದರು. ಇದಕ್ಕೆ ಗಜು ಪೈ ದನಿಗೂಡಿಸಿ, ಈ ಬಗ್ಗೆ ತನಿಖೆಗೆ ಸಮಿತಿ ರಚಿಸುವಂತೆ ಸಲಹೆ ನೀಡಿದರು.

English summary
At a general meeting chaired by ZP President Jayashree Mogera on Friday at Karwar Zilla Panchayat Hall, there were clashes by members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X