ಯತ್ನಾಳ್ ಉಚ್ಛಾಟನೆ ಪರಿಣಾಮ ಶೀಘ್ರದಲ್ಲೇ ಗೊತ್ತಾಗಲಿ- ಶಿವರಾಮ್ ಹೆಬ್ಬಾರ್
ಉತ್ತರ ಕನ್ನಡ, ಮಾರ್ಚ್ 27: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗಳು ನಡೆಯುತ್ತಿದೆ. ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.
ಬಿಜೆಪಿಯಲ್ಲಿ ಕುಟುಂಬ ರಾಜಕರಣದ ವಿರುದ್ಧ ಧ್ವನಿ ಎತ್ತಿ ತಮ್ಮ ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಮಾತನಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಂಡಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಇತರ ನಾಯಕರಿಗೆ ಎಚ್ಚರಿಕೆ ನೀಡಿದೆ.

ಸದ್ಯ ಪಕ್ಷದಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಕೆಲ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯ ಪರಿಣಾಮ ಇನ್ನು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡುನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಯಾಕಾಯಿತು ಎನ್ನುವುದು ಗೊತ್ತಿಲ್ಲ. ಅದು ಪಕ್ಷದ ನಿರ್ಣಯ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ಎರಡು ಮೂರು ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ' ಎಂದರು.

'ಇನ್ನು ಬಿಜೆಪಿ ನಮ್ಮನ್ನು ಉಚ್ಛಾಟನೆ ಮಾಡಲ್ಲ. ಪಕ್ಷ ಏನೇ ನಿರ್ಧರಿಸಿದರೂ ನಾನು ಸ್ವಾಗತಿಸುವೆ. ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆಯಿತು. ಶಾಸಕರಾದ ಸುನೀಲ್ ಕುಮಾರ್, ಆರ್. ಅಶೋಕ್ ಅವರಿಗೆ ಏನೂ ಆಗಲಿಲ್ಲ. ಪಾಪದ ಶಾಸಕರು ಮಾತ್ರ ಅಮಾನತುಗೊಂಡರು. ದೊಡ್ಡ ನಾಯಕರಿಗೆ ಏನೂ ಆಗಲ್ಲ. ಅವರು ಆರಾಮಾಗಿ ಇರುತ್ತಾರೆ. ಶಾಸಕ ಸೋಮಶೇಖರ್ ಅವರ ಹೇಳಿಕೆಗೆ ನೂರಕ್ಕೆ ನೂರಾ ಒಂದರಷ್ಟು ನನ್ನ ಬೆಂಬಲವಿದೆ' ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.












Click it and Unblock the Notifications