RV Deshpande: ಗೆದ್ದರೂ ಸೋತರೂ ಇತಿಹಾಸ ಸೃಷ್ಟಿಸಲಿರುವ ಆರ್.ವಿ. ದೇಶಪಾಂಡೆಗೆ ಶಿಷ್ಯನೇ ಎದುರಾಳಿ!
ಕಾರವಾರ, ಏಪ್ರಿಲ್ 22: ರಾಜ್ಯದ ಅತ್ಯಂತ ಹಿರಿಯ ಶಾಸಕ ಹಾಗೂ ಅತಿ ಹೆಚ್ಚು ಬಾರಿ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿರುವವರ ಪೈಕಿ ಒಬ್ಬರಾಗಿರುವ ಆರ್.ವಿ ದೇಶಪಾಂಡೆ ಈ ಬಾರಿ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಗೆ ಮುಂದಾಗಿದ್ದಾರೆ.
ಹಳಿಯಾಳ ಕ್ಷೇತ್ರದಿಂದ ಒಟ್ಟು 9 ಬಾರಿ ಸ್ಪರ್ಧೆ ಮಾಡಿದ್ದ ಆರ್.ವಿ. ದೇಶಪಾಂಡೆ 8 ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಇದೀಗ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ 9 ಬಾರಿ ಸಿದ್ದರಾಮಯ್ಯ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಆರ್.ವಿ. ದೇಶಪಾಂಡೆ 9ನೇ ಬಾರಿ ಗೆಲುವಿಗಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು ಗೆದ್ದರೇ ರಾಜ್ಯ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ.

ಈವರೆಗೆ ವಿಧಾನಸಭೆ ಆಯ್ಕೆಯಾಗಿರುವವರ ಪೈಕಿ ಆರ್ ವಿ ದೇಶಪಾಂಡೆ ಮತ್ತು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಮಾತ್ರ ಒಂದೇ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಸ್ಪರ್ಧಿಸಿದವರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ 9ನೇ ಬಾರಿ ಸ್ಪರ್ಧೆ ಮಾಡುವಾಗ ಕ್ಷೇತ್ರ ಬದಲಿಸಿದ್ದರು. ಆದರೆ ಈ ಬಾರಿ ಆರ್.ವಿ ದೇಶಪಾಂಡೆ ಗೆದ್ದರೇ ಒಂದೇ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಗೆದ್ದ ಏಕೈಕ ರಾಜಕಾರಣಿ ಎಂಬ ದಾಖಲೆ ಸೃಷ್ಟಿಯಾಗಲಿದೆ. ಒಂದೊಮ್ಮೆ ಸೋತರು ಕೂಡ ಒಂದೇ ಕ್ಷೇತ್ರದಿಂದ 10 ಬಾರಿ ಸ್ಪರ್ಧೆ ಮಾಡಿದ ರಾಜ್ಯದ ಏಕೈಕ ನಾಯಕರಾಗಲಿದ್ದಾರೆ.
ಹಳಿಯಾಳ ಆರ್.ವಿ. ದೇಶಪಾಂಡೆ ಪಾಲಿಗೆ ಭದ್ರಕೋಟೆ. ಆದರೆ ಈ ಭದ್ರಕೋಟೆಯಲ್ಲಿ ಈ ಹಿಂದೆ ತನ್ನ ನೆಚ್ಚಿನ ಶಿಷ್ಯನೇ ಬಂಡಾಯವೆದ್ದಾಗ ಕೋಟೆ ಅಲುಗಾಡಿದ ಉದಾಹರಣೆ ಕೂಡ 2008ರಲ್ಲಿ ನಡೆದಿದೆ. ಇಂತಹದೇ ಸನ್ನಿವೇಶ ಇದೀಗ ಮತ್ತೊರ್ವ ಶಿಷ್ಯನಿಂದ ಈ ಬಾರಿಯೂ ಎದುರಾಗಿದ್ದು ಆರ್.ವಿ ದೇಶಪಾಂಡೆಗೆ ಮತ್ತೆ ಕಠಿಣ ಸವಾಲು ಎದುರಾಗಿದೆ.
ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ ದೇಶಪಾಂಡೆ ಸೋಲಿಲ್ಲದ ಸರದಾರನಾಗಿ ಗೆಲುವು ಸಾಧಿಸುತ್ತಲೇ ಬರುತ್ತಿರುವಾಗ 2008ರಲ್ಲಿ ಅವರ ಶಿಷ್ಯ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ತಮಗೆ ಎರಡನೇ ಬಾರಿ ಎಂಎಲ್‌ಸಿ ಟಿಕೆಟ್ ನೀಡದಕ್ಕೆ ಬಂಡಾಯ ಸಾರಿದ್ದರು. ಪರಿಣಾಮ ಜೆಡಿಎಸ್ ಅಭ್ಯರ್ಥಿ ಸುನೀಲ್ ಹೆಗಡೆ(ಈಗ ಬಿಜೆಪಿಯಲ್ಲಿದ್ದಾರೆ) ವಿರುದ್ಧ 5,425 ಮತಗಳ ಅಂತರದಿಂದ ದೇಶಪಾಂಡೆ ಸೋತಿದ್ದರು.
ಇದೀಗ ಅವರ ಮತ್ತೋರ್ವ ಶಿಷ್ಯ ಎಸ್.ಎಲ್ ಘೋಟ್ನೆಕರ್ ಕಾಂಗ್ರೆಸ್ ಟಿಕೆಟ್ ಬಯಸಿ ಸಿಗದೆ ಇದ್ದಾಗ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೇ ತ್ರಿಕೋನ ಸ್ಪರ್ಧೆ ಎದುರಾಗಿದೆ. ಕೊನೆಯ ಚುನಾವಣೆ ಎದುರಿಸುತ್ತಿರುವ ಆರ್.ವಿ ದೇಶಪಾಂಡೆಗೆ ಕಠಿಣ ಸವಾಲು ಎದುರಾಗಿದೆ.
ಇನ್ನು ಕುತೂಹಲಕಾರಿ ವಿಚಾರ ಎಂದರೆ ಈ ಪ್ರತಿಸ್ಪರ್ಧಿಗಳಿಬ್ಬರೂ ದೇಶಪಾಂಡೆ ಅವರ ಒಂದು ಕಾಲದ ಶಿಷ್ಯರು. ಸುನೀಲ್ ಹೆಗಡೆ ಬಹಳ ಹಿಂದೆಯೇ ಕಾಂಗ್ರೆಸ್ ತೊರೆದಿದ್ದಾರೆ. ಆದರೆ ಘೋಟ್ನೇಕರ್ ಅವರು ದೇಶಪಾಂಡೆ ಅವರ ಜೊತೆಗಿದ್ದು ಎರಡು ಬಾರಿ ಎಂಎಲ್ಸಿಯೂ ಆಗಿರುವ ದೀರ್ಘಕಾಲದ ಮಿತ್ರರಾಗಿದ್ದರು. ಆದರೆ ಇದೀಗ ಶಿಷ್ಯರಿಂದಲೇ ದೇಶಪಾಂಡೆ ಸವಾಲು ಎದುರಿಸಬೇಕಾಗಿದೆ.











Click it and Unblock the Notifications