ಉಲ್ಟಾ ಹೊಡೆದ ಸರ್ಕಾರದ ಹೊಸ ಪ್ಲಾನ್: ಸಿದ್ದಿ ಸಮುದಾಯದ ಅನ್ನಕ್ಕೆ ಕುತ್ತು ತಂದ ಟೆಂಡರ್
ಕಾರವಾರ, ನವೆಂಬರ್ 24: ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಪೌಷ್ಠಿಕ ಆಹಾರ ಒದಗಿಸುವ ಸಂಬಂಧ ದಶಕಗಳ ಹಿಂದೆ ವರ್ಷದ ಆರು ತಿಂಗಳಿಗಳು ವಿತರಿಸುತ್ತಿದ್ದ ಪೌಷ್ಠಿಕ ಆಹಾರದ ಕಿಟ್‌ನ್ನು ಹೊಸ ಸರ್ಕಾರ ಪ್ರತಿ ತಿಂಗಳು ವಿತರಣೆ ಮುಂದಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದು ಕಳೆದ ಆರು ತಿಂಗಳಿಂದ ಸಿದ್ದಿ ಸಮುದಾಯದವರಿಗೆ ಪೌಷ್ಠಿಕ ಆಹಾರ ಸಿಗದಂತಾಗಿದೆ.
ಸಿದ್ದಿ ಬುಡಕಟ್ಟು ಸಮುದಾಯದವರಿಗೆ ವಿಶೇಷವಾಗಿ ಪೌಷ್ಟಿಕ ಆಹಾರ ಒದಗಿಸುವ ಸಂಬಂಧ 2011ರಲ್ಲಿ ಸರಕಾರ ಪಡಿತರ ಮೂಲಕ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮಾಡುತ್ತಿತ್ತು. ಮೊಟ್ಟೆ, ಸಕ್ಕರೆ, ಬೆಲ್ಲ, ಅಡುಗೆ ಎಣ್ಣೆ, ತುಪ್ಪ ಸೇರಿದಂತೆ ವಿವಿಧ ಪೌಷ್ಟಿಕ ಆಹಾರವನ್ನು ಕಳೆದ ಆರು ತಿಂಗಳಿಂದ ನಿಲ್ಲಿಸಲಾಗಿದೆ.

ಬಹುತೇಕ ಕೂಲಿ ನಾಲಿ ಮಾಡಿ ಬದುಕುತ್ತಿದ್ದ ನಮಗೆ ಕಿಟ್ ಸಾಕಷ್ಟು ನೆರವಾಗಿದೆ. ಆದರೆ ಇದೀಗ ಏಕಾಏಕಿ ಬಂದ್ ಮಾಡಿರುವುದು ನಮ್ಮ ಹೊಟ್ಟೆ ಮೇಲೆ ಹೊಡದಂತಾಗಿದೆ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆಟ್ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ಆರು ತಿಂಗಳು ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. 8-10 ವರ್ಷಗಳಿಂದ ಇದರ ಪ್ರಯೋಜನ ಅದೇಷ್ಟೋ ಬಡ ಸಿದ್ದಿ ಸಮುದಾಯದವರಿಗೆ ಆಗಿದೆ. ಅರಣ್ಯ ಕಿರು ಉತ್ಪನ್ನಗಳ ಮೇಲೆ ಅವಲಂಬಿತರಾದವರು ನಮಗೆ ಮಳೆಗಾಲದಲ್ಲಿ ಕೆಲಸ ಸಿಗಲ್ಲ. ಆಹಾರಕ್ಕಾಗಿ ಕಷ್ಟಪಡಬಾರದೆಂದು ಈ ಯೋಜನೆ ಜಾರಿಗೆ ತಂದಿತ್ತು. ಆದರೆ ಕಳೆದ ಜೂನ್‌ನಿಂದ ಡಿಸೆಂಬರ್ ತನಕ ಕೊಡಲಾಗಿದೆ.
ಈ ಸಾಲಿನ ಜೂನ್‌ನಲ್ಲಿ ಸಿಗುವಂಥದ್ದು ಇನ್ನೂ ಸಿಕ್ಕಿಲ್ಲ. ಮೊದಲು 15 ಕೆಜಿ ಅಕ್ಕಿ, 90 ಮೊಟ್ಟೆ ಇದ್ದಿದ್ದನ್ನು ಅಕ್ಕಿ 8 ಕೆಜಿಗೆ ಹಾಗೂ ಮೊಟ್ಟೆ 30ಕ್ಕೆ ಇಳಿಸಿದ್ದರು. ಅಲ್ಲದೆ ಸಕ್ಕರೆ ಒಂದು ಕೆಜಿ, ಒಂದು ಕೆಜಿ ಬೆಲ್ಲ, ಎರಡು ಕೆಜಿ ಅಡುಗೆ ಎಣ್ಣೆ, ಅರ್ಧ ಕೆಜಿ ತುಪ್ಪ, ಬೇಳೆ ಕಾಳುಗಳು ಸಿಗುತ್ತಿತ್ತು. ಆದರೆ ಈಗ ಎಲ್ಲವೂ ಬಂದ್ ಮಾಡಲಾಗಿದೆ. ಇಲಾಖೆ ಕೇಳಿದರೆ ಟೆಂಡರ್ ಆಗಿಲ್ಲ, ಬಜೆಟ್ ಇಲ್ಲ ಎಂಬ ಕಾರಣಗಳನ್ನ ನೀಡುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕಾಳಜಿ ವಹಿಸಬೇಕು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಉಪಾಧ್ಯಕ್ಷ ಜಾನ್ ಕೋಸ್ಟಾ ಸಿದ್ದಿ ಒತ್ತಾಯಿಸಿದ್ದಾರೆ.
ಪೌಷ್ಟಿಕ ಆಹಾರ ಆರು ತಿಂಗಳಿಂದ ಬಂದಿಲ್ಲ. ಮಳೆ ಇಲ್ಲದೆ ಬೆಳೆ ಬಂದಿಲ್ಲ. ಕೂಲಿ ಇಲ್ಲ. ಇದರಿಂದ ಉಪವಾಸ ಬೀಳುವ ಪರಿಸ್ಥಿತಿ ಇದ್ದು ಕೂಡಲೇ ಪೌಷ್ಠಿಕ ಆಹಾರಸ ಕಿಟ್ ವಿತರಣೆ ಮಾಡಬೇಕು. ಇಲ್ಲದೆ ಇದ್ದಲ್ಲಿ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆಟ್ ಸಿದ್ದಿ ಎಚ್ಚರಿಸಿದ್ದಾರೆ.
ಪ್ರತಿ ತಿಂಗಳು ನೀಡಲು ನಿರ್ಧಾರ
ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಈ ಹಿಂದೆ 6 ತಿಂಗಳಿಗೆ ನೀಡಲಾಗುತ್ತಿತ್ತು. ಆದರೆ ಇದೀಗ ಹೊಸ ಸರ್ಕಾರ ಬಂದ ಬಳಿಕ ತಿಂಗಳಿಗೊಮ್ಮೆ ನೀಡಲು ಸೂಚಿಸಿದೆ. ಅದರಂತೆ 3 ತಿಂಗಳಿಗೆ ಅಲ್ಪಾವಧಿ ಟೆಂಡರ್ ಕರೆಯಲು ಅವಕಾಶ ನೀಡಿದ್ದು ಸದ್ಯ ಟೆಂಡರ್ ಕೂಡ ಕರೆಯಲಾಗಿದೆ. ಇದೀಗ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಟೆಂಡರ್ ಕರೆದಿದ್ದು ಸೋಮವಾರ ಆಹಾರದ ಕ್ವಾಂಟಿಟಿ ಚೆಕ್ ಮಾಡಿ ತೆರಳಿದ್ದಾರೆ. ಇನ್ನೊಂದು 15 ದಿನದಲ್ಲಿ ಈ ಪ್ರಕ್ರಿಯೆ ಮುಗಿದು ವಿತರಣೆ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ವೈ.ಕೆ ಉಮೇಶ ತಿಳಿಸಿದ್ದಾರೆ.












Click it and Unblock the Notifications