ಕಾರವಾರ ಕಿಮ್ಸ್‌ಗೆ ವಾಪಸ್ ಆದ ಡಾ. ಶಿವಾನಂದ ಕುಡ್ತರಕರ್
ಕಾರವಾರ, ಡಿಸೆಂಬರ್ 18: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಆಸ್ಪತ್ರೆಯ ಸರ್ಜನ್ ಹಾಗೂ ವೈದ್ಯಕೀಯ ಅಧೀಕ್ಷಕರಾಗಿ ಡಾ. ಶಿವಾನಂದ ಕುಡ್ತರಕರ್ ಮರು ನೇಮಕವಾಗಿದ್ದಾರೆ.
ಸರ್ಕಾರದ ಆದೇಶ ಬರುತ್ತಿದ್ದಂತೆ ಡಾ. ಶಿವಾನಂದ ಕುಡ್ತರಕರ್ ಆಸ್ಪತ್ರೆಗೆ ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಅವರ ವಿರುದ್ಧ ಪ್ರತಿಭಟನೆಗಳು ಮುಂದುವರೆದಿದೆ. ಶಸ್ತ್ರ ಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಡಾ. ಶಿವನಾಂದ ವರ್ಗಾವಣೆಗೊಂಡಿದ್ದರು.
ಸೆಪ್ಟೆಂಬರ್ 3ರಂದು ಆಸ್ಪತ್ರೆಯಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆಗಾಗಿ ಗೀತಾ ಬಾನಾವಳಿ ಎಂಬ ಮಹಿಳೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಯ ವೇಳೆ ಅವರು ಮೃತಪಟ್ಟಿದ್ದರು. ಸರ್ಜನ್ ಆಗಿದ್ದ ಡಾ. ಶಿವಾನಂದ ಕುಡ್ತರಕರ್ ನಿರ್ಲಕ್ಷದಿಂದಲೇ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು.

ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ದಾಖಲಾಗಿತ್ತು. ಈ ವಿಷಯ ಸರ್ಕಾರದ ಗಮನಕ್ಕೂ ಹೋದ ಕಾರಣ ಜಿಲ್ಲಾಡಳಿತಕ್ಕೆ ಘಟನೆ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಸರ್ಕಾರ ಡಾ. ಶಿವಾನಂದ ಕುಡ್ತರಕರ್ ವರ್ಗಾವಣೆ ಮಾಡಿತ್ತು. ಹುದ್ದೆಗೆ ಸ್ಥಾನಿಕ ವೈದ್ಯಕೀಯ ಅಧಿಕಾರಿಯಾಗಿದ್ದ ಡಾ. ವೆಂಕಟೇಶ್ ನೇಮಿಸಲಾಗಿತ್ತು.
ವರ್ಗಾವಣೆಯನ್ನು ಪ್ರಶ್ನಿಸಿ ಡಾ. ಶಿವಾನಂದ ಕುಡ್ತರಕರ್ ಕರ್ನಾಟಕ ಆಡಳಿತ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಎಟಿಯಲ್ಲಿ ಸರ್ಕಾರದ ವರ್ಗಾವಣೆ ಆದೇಶದ ವಿಚಾರಣೆ ನಡೆದಿದೆ. ಇತ್ತೀಚಿಗೆ ತನಿಖಾ ತಂಡ ಬಾಣಂತಿ ಸಾವಿನ ಪ್ರಕರಣದಲ್ಲಿ ಕುಡ್ತರಕರ್ ನಿರ್ದೋಷಿ ಎಂದು ವರದಿ ಬಂದಿತ್ತು. ಕೆಎಟಿ ಸರ್ಕಾರಕ್ಕೆ ಅವರನ್ನು ಮರು ನೇಮಕ ಮಾಡುವಂತೆ ಆದೇಶ ನೀಡಿತ್ತು.
ಆರೋಗ್ಯ ಇಲಾಖೆ ಡಾ. ಶಿವಾನಂದ ಕುಡ್ತರಕರ್ ಅವರನ್ನು ಸರ್ಜನ್ ಹಾಗೂ ವೈದ್ಯಕೀಯ ಅಧೀಕ್ಷಕ ಹುದ್ದೆಗೆ ಮರು ನೇಮಕ ಮಾಡಿ ಆದೇಶಿಸಿತ್ತು. 4 ವರ್ಷಗಳಿಂದ ಅವರು ಜಿಲ್ಲಾ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಣಂತಿ ಸಾವಿನ ಆರೋಪ ಬಂದ ನಂತರ ಅವರನ್ನು ವರ್ಗಾವಣೆ ಮಾಡಿದ್ದರಿಂದ ಸಾಕಷ್ಟು ಮುಜುಗರ ಅನುಭವಿಸಿದ್ದರು.
ಬಾಣಂತಿ ಸಾವಿನ ಪ್ರಕರಣದ ಸಂಬಧ ಸರ್ಜನ್ ವಿರುದ್ಧ ನಿರ್ಲಕ್ಷತನದ ಆರೋಪವಿದೆ. ಅವರನ್ನು ಮತ್ತೆ ಆ ಹುದ್ದೆಗೆ ನೇಮಿಸಿರುವ ಕ್ರಮ ಸರಿಯಾದುದ್ದಲ್ಲ. ಸರ್ಕಾರ ತನ್ನ ಕ್ರಮವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಾಗುವುದು ಎಂದು ಮೀನುಗಾರ ಮುಖಂಡರುಗಳು, ಜನರು ಎಚ್ಚರಿಸಿದ್ದಾರೆ.












Click it and Unblock the Notifications